Snap Inc. 2023 ಹೂಡಿಕೆದಾರರ ದಿನ – ಮರುಅವಲೋಕನ

ಇಂದು ನಾವು ಆರ್ಥಿಕ ವಿಶ್ಲೇಷಕರು ಮತ್ತು ಸಾಂಸ್ಥಿಕ ಹೂಡಿಕೆದಾರರಿಗಾಗಿ ಒಂದು ಹೂಡಿಕೆದಾರರ ದಿನವನ್ನು ಆಯೋಜಿಸಿದ್ದೆವು. ಮುಖತಃ ಸೇರಲು ಅಥವಾ ದೂರದಿಂದ ವೀಕ್ಷಿಸಲು ಸಾಧ್ಯವಾದವರಿಗೆ, ನಮ್ಮ ದೃಷ್ಟಿಕೋನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ಸಂತಸಕರವಾಗಿತ್ತು. 
ನಮ್ಮ ಹೂಡಿಕೆದಾರರ ಸಂಬಂಧಗಳ ವೆಬ್‌ಸೈಟ್‌ನಲ್ಲಿ ಇಲ್ಲಿ ನೀವು ಪೂರ್ಣ ಪ್ರತಿಲಿಪಿಯನ್ನು ಮತ್ತು ಸ್ಲೈಡ್‌ಗಳನ್ನು ನೋಡಬಹುದು. ಕೆಳಗೆ ನೀವು ಕೆಲವು ಪ್ರಮುಖ ಅಂಕಿ ಅಂಶಗಳು ಮತ್ತು ಪ್ರತಿ ಕಾರ್ಯಕಾರಿ ಮಾತುಗಾರರ ಪ್ರಸ್ತುತಿಗಳ ಸಾರಾಂಶವನ್ನು ನೋಡಬಹುದು.
  • ನಮ್ಮ ಸಮುದಾಯವು ಈಗ 750 ಮಿಲಿಯನ್‌ಗೂ ಅಧಿಕ ಮಾಸಿಕ ಸಕ್ರಿಯ ಬಳಕೆದಾರರಿಗೆ ವಿಸ್ತರಣೆಯಾಗಿದೆ.
  • ನಮ್ಮ ಪ್ರಸ್ತುತ ಬೆಳವಣಿಗೆ ದರದಲ್ಲಿ, ಮುಂದಿನ ಎರಡು ಮೂರು ವರ್ಷಗಳಲ್ಲಿ 1 ಬಿಲಿಯನ್‌ಗಿಂತಲೂ ಹೆಚ್ಚು ಜನರನ್ನು ತಲುಪಲು Snapchat ಗೆ ಇದು ಮಾರ್ಗ ಕಲ್ಪಿಸಲಿದೆ.
  • ಉತ್ತರ ಅಮೆರಿಕಾದಲ್ಲಿ, ನಾವು 150 ಮಿಲಿಯನ್‌ಗೂ ಅಧಿಕ ಮಾಸಿಕ ಸಕ್ರಿಯ ಬಳಕೆದಾರರಷ್ಟು ಬೆಳವಣಿಗೆ ಕಂಡಿದ್ದೇವೆ.
  • US ನಲ್ಲಿನ Snapchatter ಗಳು ಪ್ರತಿ ದಿನ ಸುಮಾರು 40 ಬಾರಿ ಆ್ಯಪ್ ತೆರೆಯುತ್ತಾರೆ.
  • ಪ್ರತಿ ದಿನ Snapchat ತೆರೆಯುವ 60% ಗೂ ಅಧಿಕ Snapchatter ಗಳು Snap ಗಳನ್ನು ಸೃಷ್ಟಿಸುತ್ತಾರೆ.
  • Snapchat ಡೌನ್‌ಲೋಡ್ ಮಾಡಿದ 70% ಗೂ ಹೆಚ್ಚಿನ Snapchatter ಗಳು ಆ್ಯಪ್‌ನಲ್ಲಿ ತಮ್ಮ ಮೊದಲನೇ ದಿನ AR ನೊಂದಿಗೆ ತೊಡಗಿಕೊಳ್ಳುತ್ತಾರೆ.
  • ಪ್ರತಿ Spotlight ವೀಕ್ಷಣೆಗೆ ವ್ಯಯಿಸುವ ಸಮಯವು ಈಗ ಪ್ರತಿ ಸ್ನೇಹಿತರ ಕಥೆ ವೀಕ್ಷಣೆಗೆ ವ್ಯಯಿಸುವ ಸಮಯವನ್ನು ಅರ್ಥಪೂರ್ಣವಾಗಿ ಮೀರುತ್ತದೆ.
  • Snapchat+ ಬಿಡುಗಡೆ ಮಾಡಿದ ಕೇವಲ ಆರು ತಿಂಗಳಲ್ಲಿ, ಅದು 2.5 ಮಿಲಿಯನ್‌ಗೂ ಅಧಿಕ ಸಬ್‌ಸ್ಕ್ರೈಬರ್‌ಗಳನ್ನು ಮತ್ತು $100 ಮಿಲಿಯನ್‌ಗೂ ಅಧಿಕ ವಾರ್ಷಿಕ ಆದಾಯ ದರವನ್ನು ತಲುಪಿದೆ.
ಸಹ-ಸಂಸ್ಥಾಪಕ ಮತ್ತು CEO ಇವಾನ್ ಸ್ಪೀಗೆಲ್ ಅವರು, Snap ನ ದೃಷ್ಟಿ, ಪ್ರಗತಿ, ಮತ್ತು ಒಂದು ಉದ್ಯಮವಾಗಿ ಯೋಜನೆಗಳು, ಹಾಗೂ ಕಂಪನಿಗೆ ದೀರ್ಘಕಾಲೀನ ಅವಕಾಶ ಮತ್ತು ಸಾಮರ್ಥ್ಯದ ಕುರಿತು ಚರ್ಚೆಯೊಂದಿಗೆ ದಿನವನ್ನು ಆರಂಭಿಸಿದರು:
"ನೀವು ಇಲ್ಲಿಗೆ ಆಗಮಿಸಿರುವ ಬಗ್ಗೆ ನಾವು ಆಭಾರಿಯಾಗಿದ್ದೇವೆ ಮತ್ತು Snap ಗಾಗಿ ನಮ್ಮ ದೃಷ್ಟಿಯ ಕುರಿತು ಇನ್ನಷ್ಟು ಹಂಚಿಕೊಳ್ಳಲು ಉತ್ಸುಕರಾಗಿದ್ದೇವೆ. ನಮ್ಮ ದೀರ್ಘಕಾಲೀನ ಅವಕಾಶ ಅಗಾಧವಾಗಿದೆ, ಆದರೆ ಸದ್ಯಕ್ಕೆ ನಾವು ಕೆಲವು ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದ್ದೇವೆ — ಅಸ್ಥಿರವಾದ ಬೃಹತ್ ಆರ್ಥಿಕ ವಾತಾವರಣ, ವೇದಿಕೆ ನೀತಿ ಬದಲಾವಣೆಗಳು ಮತ್ತು ಹೆಚ್ಚುತ್ತಿರುವ ಸ್ಪರ್ಧೆ."
"ನಮ್ಮ ಯೋಜನೆಗಳು ಮತ್ತು ಇವತ್ತಿನವರೆಗಿನ ನಮ್ಮ ಪ್ರಗತಿಯನ್ನು ಒದಗಿಸುವ ಮೂಲಕ ಆ ಸವಾಲುಗಳನ್ನು ಎದುರಿಸುವ ನಮ್ಮ ಸಾಮರ್ಥ್ಯದ ಕುರಿತು ನಿಮಗೆ ಆತ್ಮವಿಶ್ವಾಸವನ್ನು ನೀಡುವುದು ಇಂದಿನ ನಮ್ಮ ಗುರಿಯಾಗಿದೆ. ನಮ್ಮ ವ್ಯವಹಾರಕ್ಕೆ ದೀರ್ಘ-ಕಾಲೀನ ಸಾಮರ್ಥ್ಯದ ಕುರಿತು ನಾವು ಯಾಕೆ ಇಷ್ಟೊಂದು ಉತ್ಸುಕರಾಗಿದ್ದೇವೆ ಎನ್ನುವುದನ್ನು ಹಂಚಿಕೊಳ್ಳಲೂ ಸಹ ನಾವು ಎದುರು ನೋಡುತ್ತಿದ್ದೇವೆ."
"ಅನೇಕ ದೊಡ್ಡ ತಂತ್ರಜ್ಞಾನ ಕಂಪನಿಗಳಿಗೆ ಹೋಲಿಸಿದರೆ Snap ಈಗಲೂ ಒಂದು ಸಣ್ಣ ವ್ಯವಹಾರವಾಗಿದೆ, ಆದರೆ ನಾವು 2022 ರಲ್ಲಿ ಆದಾಯವನ್ನು $4.6 ಬಿಲಿಯನ್‌ಗೆ ಹೆಚ್ಚಿಸುವ ಮೂಲಕ ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ನಮ್ಮ ಬೃಹತ್, ತಲುಪಲು ಕಷ್ಟವಾಗುವ ಪ್ರೇಕ್ಷಕರು, ಬ್ರ್ಯಾಂಡ್ ಸುರಕ್ಷಿತ ವಾತಾವರಣ ಮತ್ತು ವಿನೂತನ ಜಾಹೀರಾತು ವೇದಿಕೆಗಳು, ಮುಂದಿನ ಪೀಳಿಗೆಯನ್ನು ತಲುಪಲು ಬಯಸುವ ವ್ಯವಹಾರಗಳಿಗೆ ನಮ್ಮನ್ನು ಮೌಲ್ಯಯುತ ಪಾಲುದಾರರನ್ನಾಗಿ ಮಾಡಿವೆ." 
"ಇಂದು, ನಮ್ಮ ಸಮುದಾಯ 750 ಮಿಲಿಯನ್‌ಗೂ ಅಧಿಕ ಮಾಸಿಕ ಸಕ್ರಿಯ ಬಳಕೆದಾರರಿಗೆ ಹೆಚ್ಚಿದೆ ಎಂದು ತಿಳಿಸಲು ನಾವು ಹರ್ಷಿಸುತ್ತೇವೆ. 20 ದೇಶಗಳಲ್ಲಿ 13 ರಿಂದ 34 ವರ್ಷದೊಳಗಿನ 75% ಗೂ ಅಧಿಕ ಜನರನ್ನು ನಾವು ತಲುಪುತ್ತಿದ್ದೇವೆ, ಈ ದೇಶಗಳಲ್ಲಿ 50% ಗೂ ಹೆಚ್ಚಿನ ವಿಸ್ತಾರದ ಜಾಹೀರಾತು ಮಾರುಕಟ್ಟೆಯನ್ನು ಪ್ರತಿನಿಧಿಸುತ್ತಿದ್ದೇವೆ. ನಮ್ಮ ಹಿಂದಿನ ಹೂಡಿಕೆದಾರರ ದಿನದಿಂದ ಈವರೆಗೆ 100 ಮಿಲಿಯನ್‌ಗೂ ಅಧಿಕ ದೈನಂದಿನ ಸಕ್ರಿಯ ಬಳಕೆದಾರರು Snapchat ಗೆ ಸೇರಿದ್ದು, ಈಗ ನಮ್ಮ ಸಮುದಾಯವು 375 ಮಿಲಿಯನ್‌ಗೂ ಅಧಿಕ ದೈನಂದಿನ ಸಕ್ರಿಯ ಬಳಕೆದಾರರಿಗೆ ವಿಸ್ತರಣೆಯಾಗಿದೆ."
"ಸರಾಸರಿ, ಪ್ರತಿ ದಿನ 5 ಬಿಲಿಯನ್‌ಗೂ ಅಧಿಕ Snap ಗಳನ್ನು ಸೃಷ್ಟಿಸಲಾಗುತ್ತಿದೆ, ಈ ಪೈಕಿ ಅತ್ಯುತ್ತಮವಾದವುಗಳನ್ನು ನಮ್ಮ ಕಮ್ಯುನಿಟಿ ಸ್ಪಾಟ್‌ಲೈಟ್‌ಗೆ ಸಲ್ಲಿಸುತ್ತದೆ. ಪ್ರತಿ ಸ್ಪಾಟ್‌ಲೈಟ್ ವೀಕ್ಷಣೆಗೆ ವ್ಯಯಿಸಿದ ಸಮಯದಲ್ಲಿ ತ್ವರಿತ ಬೆಳವಣಿಗೆಯನ್ನು ಕಂಡು ನಾವು ಸಂತೃಪ್ತರಾಗಿದ್ದೇವೆ, ಇದು ಈಗ ಪ್ರತಿ ಕಥೆ ವೀಕ್ಷಣೆಗೆ ಸ್ನೇಹಿತರ ಕಥೆಗಳನ್ನು ನೋಡುತ್ತ ಕಳೆಯುವ ಸಮಯವನ್ನು ಅರ್ಥಪೂರ್ಣವಾಗಿ ಮೀರುತ್ತದೆ."
"ಬಾಬಿ ಮತ್ತು ನಾನು ಮೊದಲು Snapchat ರಚಿಸಲು ಆರಂಭಿಸಿದಾಗ, ನಾವು ಸಂವಹನವನ್ನು ಇನ್ನಷ್ಟು ಉತ್ತಮಪಡಿಸಲು ಬಯಸಿದ್ದೆವು. ಡಿಜಿಟಲ್ ಸಂಭಾಷಣೆಗಳಿಗೆ ಜೀವ ಕೊಡಲು ಕಣ್ಮರೆಯಾಗುವ ಚಿತ್ರಗಳನ್ನು ಬಳಸಿಕೊಂಡು, ಅದನ್ನು ದೃಶ್ಯಾತ್ಮಕ ಮತ್ತು ಅಲ್ಪಕಾಲಿಕವಾಗಿ ಮಾಡುವ ಮೂಲಕ ನಾವು ಆರಂಭಿಸಿದೆವು. ಅಂದಿನಿಂದ, ಪ್ರತಿದಿನದ ಮಾನವರ ನಡವಳಿಕೆಗಳನ್ನು ಗುರುತಿಸುವ ಮೂಲಕ ಮತ್ತು ವಿನ್ಯಾಸ, ಆವಿಷ್ಕಾರ ಮತ್ತು ತಂತ್ರಜ್ಞಾನದ ಮೂಲಕ ಅವುಗಳನ್ನು ಇನ್ನಷ್ಟು ಉತ್ತಮವಾಗಿಸಲು ಕೆಲಸ ಮಾಡುವುದರೊಂದಿಗೆ ನಾವು ನಮ್ಮ ವ್ಯವಹಾರವನ್ನು ಬೆಳೆಸಿದ್ದೇವೆ."
"ದೀರ್ಘಕಾಲದಲ್ಲಿ ಯಶಸ್ವಿ ವ್ಯವಹಾರ ನಿರ್ಮಾಣ ಮಾಡಲು ನಮಗೆ ಬೇಕಿರುವ ಎಲ್ಲವನ್ನೂ ನಾವು ಹೊಂದಿದ್ದೇವೆ. ಒಂದು ಬೃಹತ್ ಮತ್ತು ಬೆಳೆಯುತ್ತಿರುವ ಕಮ್ಯುನಿಟಿ, ನಿರಂತರ ವಿಕಸನವಾಗುತ್ತಿರುವ ಒಂದು ವಿನೂತನ ಮತ್ತು ತೊಡಗಿಕೊಳ್ಳುವ ಉತ್ಪನ್ನ, ಸಕಾರಾತ್ಮಕ ಮುಕ್ತ ನಗದು ಹರಿವಿನ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಬಲಿಷ್ಠ ಬ್ಯಾಲೆನ್ಸ್ ಶೀಟ್ ಮತ್ತು ನಾವು ನಂಬಿಕೆ ಇರಿಸಿರುವುದಕ್ಕಾಗಿನ ದೀರ್ಘಕಾಲಿಕ ದೃಷ್ಟಿಯು ಜಗತ್ತು ಹಿಂದೆಂದೂ ನೋಡಿರದ ಗಣಕೀಕರಣದ ಅತ್ಯಂತ ಅರ್ಥಪೂರ್ಣ ಸುಧಾರಣೆಗೆ ಎಡೆಮಾಡಿಕೊಡಲಿದೆ: ವರ್ಧಿತ ವಾಸ್ತವ."
ಬೆಳವಣಿಗೆಯ SVP ಜಾಕೊಬ್ ಆಂಡ್ರೆಯು, ನಮ್ಮ ಜಾಗತಿಕ ಪ್ರೇಕ್ಷಕರ ಬೆಳವಣಿಗೆಯನ್ನು ಮುಂದುವರಿಸುವ, Snapchatter ತೊಡಗಿಕೊಳ್ಳುವಿಕೆಯನ್ನು ಹೆಚ್ಚಿಸುವ, ಮತ್ತು Snapchat ನಲ್ಲಿ ದೀರ್ಘಕಾಲಿಕ ಉಳಿಸಿಕೊಳ್ಳುವಿಕೆಯನ್ನು ಪ್ರೇರೇಪಿಸುವುದನ್ನು ಮುಂದುವರಿಸುವ Snap ನ ಯೋಜನೆಗಳನ್ನು ವಿವರಿಸಿದರು.
"ಅತ್ಯಧಿಕ ನಗದೀಕರಿಸಬಲ್ಲ ಮಾರುಕಟ್ಟೆಗಳಲ್ಲಿ ನಮ್ಮ ವ್ಯಾಪ್ತಿಯನ್ನು ವಿಸ್ತರಿಸುವುದನ್ನು ನಾವು ಮುಂದುವರಿಸಿದ್ದೇವೆ, ಉದಾಹರಣೆಗೆ ಉತ್ತರ ಅಮೆರಿಕಾದಲ್ಲಿ ನಾವು 150 ದಶಲಕ್ಷಕ್ಕಿಂತ ಹೆಚ್ಚು ಮಾಸಿಕ ಸಕ್ರಿಯ ಬಳಕೆದಾರರಿಗೆ ಬೆಳವಣಿಗೆಯಾಗಿದ್ದೇವೆ."
"ನಮ್ಮ ಪ್ರಸ್ತುತ ಬೆಳವಣಿಗೆ ದರದಲ್ಲಿ, ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ 1 ಬಿಲಿಯನ್‌ಗಿಂತ ಅಧಿಕ ಜನರನ್ನು ತಲುಪಲು Snapchat ಗೆ ಒಂದು ಮಾರ್ಗವನ್ನು ನಾವು ಕಾಣುತ್ತಿದ್ದೇವೆ."
"ನಮ್ಮ ಸೇವೆಯು ಆಕರ್ಷಕ, ಸಮ್ಮೋಹಕ ಬಳಕೆಯನ್ನು ಒದಗಿಸುತ್ತದೆ — ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ವೇಗವಾದ, ಸುಲಭವಾದ, ವಿನೋದಮಯ ದೃಶ್ಯಾತ್ಮಕ ಸಂವಹನ — ಮತ್ತು ನಮ್ಮ Snapchat ಸಮುದಾಯವನ್ನು ಬೆಳೆಸುವ ಸಾಬೀತುಪಡಿಸುವ ಹೆಜ್ಜೆಗುರುತನ್ನು ನಾವು ಹೊಂದಿದ್ದೇವೆ... ನಾವು ಮೂರು ಅಂಶಗಳಲ್ಲಿ ನಮ್ಮ ಬೆಳವಣಿಗೆಯ ಕುರಿತು ಯೋಚಿಸುತ್ತೇವೆ: ಹೊಸ Snapchatter ಗಳನ್ನು ಸೇರಿಸುವುದು, ಅವರ ತೊಡಗಿಕೊಳ್ಳುವಿಕೆಯನ್ನು ಹೆಚ್ಚಿಸುವುದು ಮತ್ತು ಕಾಲಾಂತರದಲ್ಲಿ ಅವರನ್ನು ಉಳಿಸಿಕೊಳ್ಳುವುದು."
"ಹೊಸ Snapchatter ಗಳನ್ನು ಅವರ ಬದುಕಿನ ಈ ಮಹತ್ವದ ಕ್ಷಣದಲ್ಲಿ ಆನ್‌ಬೋರ್ಡ್ ಮಾಡಿಕೊಳ್ಳುವುದು ನಮ್ಮ ಸಮುದಾಯದ ದೀರ್ಘಕಾಲಿಕ ಆರೋಗ್ಯವನ್ನು ಬೆಂಬಲಿಸುತ್ತದೆ — ತಮ್ಮ ಸ್ಮಾರ್ಟ್‌ಫೋನ್ ಬಳಕೆಯಲ್ಲಿ ಆರಂಭ ಹಂತದಲ್ಲೇ ನಮ್ಮ ಸೇವೆಯನ್ನು Snapchatter ಗಳು ಕಂಡುಕೊಂಡಾಗ ಮತ್ತು ತಮ್ಮ ಆತ್ಮೀಯ ಸ್ನೇಹಿತರೊಂದಿಗೆ Snap ಮಾಡುವುದನ್ನು ಆರಂಭಿಸಿದಾಗ, ಅವರು Snapchat ನಲ್ಲಿ ದೈನಂದಿನ ಸಕ್ರಿಯ ಬಳಕೆದಾರರಾಗಿ ಉಳಿಯುವ ಸಾಧ್ಯತೆ ತುಂಬಾ ಹೆಚ್ಚಿದೆ ಎನ್ನುವುದನ್ನು ನಾವು ಕಂಡುಕೊಂಡಿದ್ದೇವೆ."
"ಇಂದು 35 ವರ್ಷಕ್ಕೆ ಮೇಲ್ಪಟ್ಟ Snapchatter ಗಳು Snapchat ನಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸಂಪರ್ಕಿತರಾಗಿದ್ದಾರೆ, ಈ ಸಮೂಹದ DAU ಮತ್ತು ಕಂಟೆಂಟ್‌ಗೆ ವ್ಯಯಿಸಿದ ಸಮಯದ ಬೆಳವಣಿಗೆ ಮತ್ತು ಒಟ್ಟಾರೆ DAU ಮತ್ತು ಕಂಟೆಂಟ್‌ಗೆ ವ್ಯಯಿಸಿದ ಸಮಯದ ಬೆಳವಣಿಗೆ ಎರಡರಲ್ಲೂ. ನಮ್ಮೊಂದಿಗೆ ಅವರು ಸಹಜವಾಗಿ 'ವಯಸ್ಕರಾಗುವ' ಕಾರಣ Snapchatter ಗಳನ್ನು ಉಳಿಸಿಕೊಳ್ಳುವ ನಮ್ಮ ಪ್ರಬಲ ನೀತಿಗೆ ಇದು ಪೂರಕವಾಗಿದ್ದು, ಹೆಚ್ಚು ವಯಸ್ಸಿನ ಜನಸಮುದಾಯದಲ್ಲಿ ನಮ್ಮ ವ್ಯಾಪ್ತಿಯನ್ನು ಬೆಳೆಸುತ್ತಿದೆ."
"ನಮ್ಮ ಸೇವೆಯಲ್ಲಿ ಒಬ್ಬ Snapchatter ಮೊದಲ ವರ್ಷದ ಬಳಿಕ ಐದು ವರ್ಷಗಳಿಗೆ, ವಾರ್ಷಿಕಗೊಳಿಸಿದ ಉಳಿಸಿಕೊಳ್ಳುವಿಕೆ ಸರಾಸರಿ ಅಂದಾಜು 90% ಇದೆ. ಜೀವನದ ನಿರ್ಣಾಯಕ ಕ್ಷಣಗಳಲ್ಲಿ — ಉದಾಹರಣೆಗೆ ಹೊಸ ಶಾಲೆ ತೆರೆಯುವುದು, ಸ್ವಂತವಾಗಿ ಹೊರಗೆ ಸುತ್ತಾಡುವುದು ಅಥವಾ ಹೊಸ ಕೆಲಸಕ್ಕೆ ಸೇರುವುದು — ಸ್ನೇಹಿತರೊಂದಿಗೆ ಸಂಪರ್ಕಗೊಳ್ಳಲು ಮತ್ತು ಪ್ರಸ್ತುತ ಇರುವ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲು Snapchat ವೇಗ ಮತ್ತು ವಿನೋದಮಯವಾದ ವಿಧಾನವನ್ನು ಒದಗಿಸುತ್ತದೆ, ಈ ಮೂಲಕ ಕಾಲಕ್ರಮೇಣ ನಮ್ಮ ಸೇವೆಗಳಾದ್ಯಂತ ಪ್ರಬಲ ತೊಡಗಿಕೊಳ್ಳುವಿಕೆ ಮತ್ತು ಉಳಿಸಿಕೊಳ್ಳುವಿಕೆಗೆ ಕಾರಣವಾಗುತ್ತದೆ."
"ಬೇರೆ ಕಡೆಗಳಲ್ಲಿ ತಲುಪಲು ಕಷ್ಟಸಾಧ್ಯವಾದ ಜನಸಮುದಾಯದೊಂದಿಗೆ, ವಿಶ್ವಾದ್ಯಂತದ ಬಹುತೇಕ ಮೌಲ್ಯಯುತ ಭೌಗೋಳಿಕತೆಗಳಲ್ಲಿ ನಾವು ಬೃಹತ್, ಬೆಳೆಯುತ್ತಿರುವ ಮತ್ತು ತೊಡಗಿಕೊಂಡಿರುವ ಸಮುದಾಯವನ್ನು ನಿರ್ಮಿಸಿದ್ದೇವೆ. ನಮ್ಮ ಸಮುದಾಯಕ್ಕೆ ಬಾಳಿಕೆಯ ಮೌಲ್ಯವನ್ನು ತಲುಪಿಸುವ ಮೂಲಕ ಮತ್ತು ಅವರನ್ನು ಉನ್ನತ ಮಟ್ಟದಲ್ಲಿ ಉಳಿಸಿಕೊಳ್ಳುವ ಮೂಲಕ ನಾವಿದನ್ನು ಮಾಡಿದ್ದೇವೆ ಮತ್ತು ನಮ್ಮ ಮೂಲ ಜನಸಮುದಾಯಗಳು ಮತ್ತು ಮಾರುಕಟ್ಟೆಗಳಲ್ಲಿ ಹಾಗೂ ಹೊಸದರಲ್ಲಿ ನಮ್ಮ ಸಮುದಾಯವನ್ನು ಬೆಳೆಸುವ ಗಮನಾರ್ಹ ಅವಕಾಶವನ್ನು ನಾವು ಈಗಲೂ ಹೊಂದಿದ್ದೇವೆ."
ಉತ್ಪನ್ನದ ಉಪಾಧ್ಯಕ್ಷ (VP) ಜಾಕ್ ಬ್ರಾಡಿ ಅವರು, Snapchat ಉತ್ಪನ್ನದ ಕುರಿತಾಗಿ ಮತ್ತು Snapchatter ಅನುಭವವನ್ನು ಸುಧಾರಿಸಲು ನಾವು ಹೇಗೆ ಯಾವಾಗಲೂ ಎದುರು ನೋಡುತ್ತಿರುತ್ತೇವೆ ಎನ್ನುವ ಕುರಿತ ಸಮಗ್ರ ನೋಟವನ್ನು ನೀಡಿದರು.
"ಸ್ನೇಹಿತರ ನಡುವೆ ಅರ್ಥಪೂರ್ಣ ಸಂವಹನದ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ, ಕಂಟೆಂಟ್ ಬಳಕೆಯ ಮೇಲೆ ಬಹುತೇಕ ಸಂಪೂರ್ಣ ಗಮನ ಕೇಂದ್ರೀಕರಿಸುವ ಇತರ ವೇದಿಕೆಗಳಿಗಿಂತ ನಾವು ಭಿನ್ನವಾಗಿ ನಿಲ್ಲುತ್ತೇವೆ. ಈ ವಿಶಿಷ್ಟ ವಿಧಾನವು ಅಧಿಕ ಆವರ್ತನದ ಬಳಕೆಗೆ, ಆಳವಾದ ತೊಡಗಿಕೊಳ್ಳುವಿಕೆಗೆ ಮತ್ತು ಚಲನಶೀಲ ಉಳಿಸಿಕೊಳ್ಳುವಿಕೆಗೆ ದಾರಿ ಮಾಡಿಕೊಡುತ್ತದೆ. ಉದಾಹರಣೆಗೆ, US ನಲ್ಲಿ Snapchatter ಗಳು ಸರಾಸರಿ ಪ್ರತಿದಿನ ಸುಮಾರು 40 ಬಾರಿ Snapchat ತೆರೆಯುತ್ತಾರೆ. [ಮತ್ತು] ಪ್ರತಿ ದಿನ Snapchat ತೆರೆಯುವ 60% ಗೂ ಅಧಿಕ Snapchatter ಗಳು Snap ಗಳನ್ನು ಸೃಷ್ಟಿಸುತ್ತಾರೆ.”
"ಇಂದು, ಸ್ನೇಹಿತರೊಂದಿಗೆ Snap ಅಥವಾ ಚಾಟ್ ಮಾಡುವ 88% Snapchatter ಗಳು ಮುಂದಿನ 7 ದಿನಗಳಿಗೆ ಪ್ರತಿದಿನ ಆ್ಯಪ್ ಬಳಸುತ್ತಾರೆ. ಮತ್ತು ಕಳೆದ ವರ್ಷದಲ್ಲಿ, ವಿಶಿಷ್ಟ ಸ್ನೇಹಿತರ ಜೋಡಿಗಳ ನಡುವಿನ ಸಂಭಾಷಣೆಗಳ ಸಂಖ್ಯೆಯು 30% ಗಿಂತ ಹೆಚ್ಚು ಬೆಳವಣಿಗೆಯಾಗಿದೆ."
"ಕಳೆದ 10 ವರ್ಷಗಳಲ್ಲಿ, ನಮ್ಮ ಸಮುದಾಯಕ್ಕೆ ಹೆಚ್ಚು ಹೆಚ್ಚು ಮೌಲ್ಯವನ್ನು ನಿರ್ಮಿಸಲು ಅಡಿಪಾಯವಾಗಿ ದೃಶ್ಯಾತ್ಮಕ ಸಂವಹನದ ಯಶಸ್ಸನ್ನು ನಾವು ಬಳಸಿಕೊಂಡಿದ್ದೇವೆ. ಇದನ್ನು ಮಾಡಲು, ಜನರು ಇಷ್ಟಪಡುವ, ಬಯಸುವ ಮತ್ತು ದಿನವೂ ಮಾಡಬೇಕಿರುವ ವಿಷಯಗಳನ್ನು ನಾವು ತೆಗೆದುಕೊಂಡೆವು ಮತ್ತು ವಿನ್ಯಾಸ ಹಾಗೂ ತಂತ್ರಜ್ಞಾನದ ಮೂಲಕ ಅವುಗಳನ್ನು ಇನ್ನಷ್ಟು ಉತ್ತಮವಾಗಿಸಲು ಕೆಲಸ ಮಾಡಿದೆವು. ದೈನಂದಿನ ನಡವಳಿಕೆಗಳ ಮೇಲೆ ಗಮನ ಕೇಂದ್ರೀಕರಿಸುವುದನ್ನು ಮುಂದುವರಿಸುವ ಮೂಲಕ, ಅಸಾಧಾರಣ ಆಳವಾದ ತೊಡಗಿಕೊಳ್ಳುವಿಕೆಯನ್ನು ಹೊಂದಿರುವ ಮತ್ತು ದೀರ್ಘಕಾಲೀನ ಉಳಿಸಿಕೊಳ್ಳುವಿಕೆಯನ್ನು ಮುನ್ನಡೆಸುವ ಸೇವೆಯನ್ನು ನಾವು ನಿರ್ಮಿಸಿದ್ದೇವೆ."
"Snapchatter ಗಳು ನಮ್ಮ ಮ್ಯಾಪ್ ಅನ್ನು ಇಷ್ಟಪಡುತ್ತಾರೆ ಮತ್ತು 300 ಮಿಲಿಯನ್‌ಗೂ ಅಧಿಕ ಜನರು ಪ್ರತಿ ತಿಂಗಳು ಅದನ್ನು ಬಳಸುತ್ತಾರೆ. ಮತ್ತು ನಾವು ನ್ಯಾವಿಗೇಶನ್ ಮ್ಯಾಪ್ ಬದಲು ಸಾಮಾಜಿಕ ಮ್ಯಾಪ್ ಒದಗಿಸುವುದರಿಂದ, ನಾವು ಅತ್ಯಂತ ಅಧಿಕ ಬಳಕೆಯ ಆವರ್ತನವನ್ನು ಹೊಂದಿದ್ದೇವೆ. ದೈನಂದಿನ ಮ್ಯಾಪ್ ಬಳಕೆದಾರರು, ತಮ್ಮ ಸ್ನೇಹಿತರು ಏನು ಮಾಡುತ್ತಿದ್ದಾರೆ ಎಂದು ನೋಡಲು ಮತ್ತು ಭೇಟಿಯಾಗಲು ಸರಾಸರಿ ದಿನಕ್ಕೆ 6 ಬಾರಿ ಮ್ಯಾಪ್ ತೆರೆಯುತ್ತಾರೆ."
"AR ನಮ್ಮ ಸಮುದಾಯದ ಬೆಳವಣಿಗೆಯ ಪ್ರಮುಖ ಚಾಲಕವಾಗಿದೆ, Snapchat ಗೆ ಹೊಸ ಬಳಕೆದಾರರನ್ನು ಹೆಚ್ಚುಹೆಚ್ಚು ಸೆಳೆಯುತ್ತಿದೆ. Snapchat ಡೌನ್‌ಲೋಡ್ ಮಾಡುವ 70% ಗೂ ಅಧಿಕ Snapchatter ಗಳು ಆ್ಯಪ್‌ನಲ್ಲಿ ತಮ್ಮ ಮೊದಲ ದಿನದಂದು AR ಜೊತೆ ತೊಡಗಿಕೊಳ್ಳುತ್ತಾರೆ ಎಂದು ನಾವು ಕಂಡುಕೊಂಡಿದ್ದೇವೆ."
"ಸ್ನೇಹಿತರ ಕಥೆಗಳ ಮೌಲ್ಯವನ್ನು ಸುಧಾರಿಸುವುದನ್ನು ಮುಂದುವರಿಸಲು, ನಾವು ಮೂರು ಪ್ರಮುಖ ಉಪಕ್ರಮಗಳ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ. ಮೊದಲನೆಯದಾಗಿ, Snapchatter ಗಳಿಗಾಗಿ ಅತ್ಯಂತ ಪ್ರಸ್ತುತ ಕಥೆಗಳನ್ನು ತೋರಿಸಲು ನಾವು ನಮ್ಮ ಶ್ರೇಯಾಂಕ ಮತ್ತು ಶಿಫಾರಸು ಮಾಡುವಿಕೆ ಮಾದರಿಗಳನ್ನು ನಿರಂತರವಾಗಿ ಸುಧಾರಣೆ ಮಾಡುತ್ತಿದ್ದೇವೆ." 
"ಎರಡನೆಯದಾಗಿ, ಸ್ನೇಹಿತರ ನಡುವೆ ಒಟ್ಟಾರೆ ಕಥೆಯ ಲಭ್ಯತೆಯನ್ನು ಹೆಚ್ಚಿಸುವ ಸಲುವಾಗಿ, ತಮ್ಮ ಕಥೆಗಳನ್ನು ಪೋಸ್ಟ್ ಮಾಡಲು Snapchatter ಗಳಿಗೆ ಸುಲಭವಾಗಿಸುವ ಸಲುವಾಗಿ ನಾವು ಟೂಲ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದೇವೆ. ನೋಡಲು ಕನಿಷ್ಟ ಒಂದು ಸ್ನೇಹಿತರ ಕಥೆ ಲಭ್ಯವಿರುವ Snapchatter ಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ 15% ಗೂ ಹೆಚ್ಚು ಏರಿಕೆಯಾಗುತ್ತಿದೆ."
"ಅಂತಿಮವಾಗಿ, ಹೆಚ್ಚುವರಿ ಮೌಲ್ಯವನ್ನು ಒದಗಿಸಲು ನಾವು ಹೊಸ ವೈಶಿಷ್ಟ್ಯಗಳನ್ನು ನಿರಂತರವಾಗಿ ಸೇರಿಸುತ್ತಿದ್ದೇವೆ. ಇತ್ತೀಚೆಗೆ ನಾವು ಕಮ್ಯುನಿಟಿಗಳನ್ನು ಆರಂಭಿಸಿದೆವು, ಇದು ಖಾಸಗಿ ಗುಂಪುಗಳಿಗಾಗಿನ ಉತ್ಪನ್ನವಾಗಿದ್ದು ಇದರಲ್ಲಿ ಸದಸ್ಯರು ಸ್ನೇಹಿತರನ್ನು ಸೇರಿಸಬಹುದು ಮತ್ತು ಹಂಚಿಕೊಂಡ ಕ್ಯಾಂಪಸ್ ಕಥೆಯನ್ನು ಪೋಸ್ಟ್ ಮಾಡಬಹುದು. ನಾವು ಕಾಲೇಜುಗಳು ಮತ್ತು ಹೈಸ್ಕೂಲ್‌ಗಳಿಂದ ಆರಂಭಿಸಿದೆವು ಮತ್ತು ಕಾಲಕ್ರಮೇಣ ಹೆಚ್ಚಿನ ಕಮ್ಯುನಿಟಿಗಳಿಗೆ ಅದನ್ನು ವಿಸ್ತರಿಸಲಿದ್ದೇವೆ. ಈಗ ನಾವು US ನಲ್ಲಿ 1400 ಕ್ಕೂ ಅಧಿಕ ಕಾಲೇಜುಗಳನ್ನು ಆನ್‌ಬೋರ್ಡ್ ಮಾಡಿಕೊಂಡಿದ್ದೇವೆ ಮತ್ತು ವಿಶ್ವಾದ್ಯಂತದ ಇನ್ನಷ್ಟು ವಿಶ್ವವಿದ್ಯಾಲಯಗಳಿಗೆ ವಿಸ್ತರಿಸುವುದನ್ನು ಮುಂದುವರಿಸಲಿದ್ದೇವೆ."
"US ನಲ್ಲಿ, ಕ್ರಿಯೇಟರ್ ಕಥೆಗಳು ಮತ್ತು ಸ್ಪಾಟ್‌ಲೈಟ್ ಎರಡಕ್ಕೂ ಪ್ರತಿ ವೀಕ್ಷಣೆಗೆ ವ್ಯಯಿಸಿದ ಸಮಯವು ಕಳೆದ ವರ್ಷಕ್ಕೆ ಹೋಲಿಸಿದರೆ Q4 ನಲ್ಲಿ ಎರಡಂಕಿಗಳ ಶೇಕಡಾವಾರಿನೊಂದಿಗೆ ಭಾರೀ ಬೆಳವಣಿಗೆ ಕಂಡಿದೆ. ಆದ ಕಾರಣ ನಾವು ಕ್ರಿಯೇಟರ್‌ಗಳನ್ನು ಇನ್ನಷ್ಟು ಬಲಪಡಿಸುತ್ತಿದ್ದೇವೆ... ಸ್ಪಾಟ್‌ಲೈಟ್‌ ಇತ್ತೀಚಿನದಾಗಿದೆ, ಅದಾಗ್ಯೂ ಅದರ ಬೆಳವಣಿಗೆ ಬೆರಗುಗೊಳಿಸುವಂತಿದೆ. ಸ್ಪಾಟ್‌ಲೈಟ್ ಈಗಾಗಲೇ ತಿಂಗಳಿಗೆ 300 ಮಿಲಿಯನ್‌ಗಿಂತಲೂ ಅಧಿಕ Snapchatter ಗಳನ್ನು ತಲುಪುತ್ತಿದೆ. Q4 ನಲ್ಲಿ, ಸ್ಪಾಟ್‌ಲೈಟ್ ವೀಕ್ಷಿಸಲು ವ್ಯಯಿಸಿದ ಒಟ್ಟು ಸಮಯವು ಹಿಂದಿನ ವರ್ಷದ ಪ್ರಮಾಣದ ತುಲನೆಯಲ್ಲಿ ದುಪ್ಪಟ್ಟಿಗಿಂತ ಹೆಚ್ಚಾಗಿದೆ ಮತ್ತು ಅದೇ ಕಾಲ ಘಟ್ಟದಲ್ಲಿ ಸ್ಪಾಟ್‌ಲೈಟ್ ಸಲ್ಲಿಕೆಗಳು ಸುಮಾರು 20% ಹೆಚ್ಚಾಗಿವೆ."
"ಈ ಎಲ್ಲವು, ಹೊಸ, ಅನನ್ಯ ಮತ್ತು ಪ್ರಾಯೋಗಿಕ ವೈಶಿಷ್ಟ್ಯಗಳನ್ನು ನೇರವಾಗಿ ಈ ಅತ್ಯಂತ ಹುಮ್ಮಸ್ಸಿನ ಪ್ರೇಕ್ಷಕರಿಗೆ ಒದಗಿಸುವ ಸಬ್‌ಸ್ಕ್ರಿಪ್ಶನ್ ಸೇವೆಯನ್ನು ರೂಪಿಸಲು ನಮಗೆ ವಿಶಿಷ್ಟ ಸ್ಥಾನವನ್ನು ಒದಗಿಸಿಕೊಟ್ಟವು. ಇದನ್ನು ನಾವು ತಿಂಗಳಿಗೆ $3.99 ರ ನಮ್ಮ ಸಬ್‌ಸ್ಕ್ರಿಪ್ಶನ್ ಸೇವೆಯಾದ Snapchat+ ನೊಂದಿಗೆ ಮಾಡಿದೆವು. ಕಳೆದ ಜುಲೈನಲ್ಲಿ ಆರಂಭಿಸಲಾದ ಈ ಸೇವೆಯೊಂದಿಗೆ ಈಗಾಗಲೇ ನಾವು 2.5 ದಶಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳಿಗೆ ಸೇವೆ ಒದಗಿಸುತ್ತಿದ್ದೇವೆ."
ಮುಖ್ಯ ಮಾರ್ಕೆಟಿಂಗ್ ಅಧಿಕಾರಿ, ಕೆನ್ನಿ ಮಿಚೆಲ್ ಅವರು, ಮಾರಾಟಗಾರರಿಗೆ Snapchat ಯಾಕೆ ಅಷ್ಟೊಂದು ಶಕ್ತಿಶಾಲಿಯಾಗಿದೆ, ಬ್ರ್ಯಾಂಡ್‌ಗಳು ಯಾವಾಗ ವೇದಿಕೆಯಲ್ಲಿ ತಮ್ಮ ಕಥೆಗಳನ್ನು ಹಂಚಿಕೊಳ್ಳಬೇಕು ಮತ್ತು ಜಾಹೀರಾತುದಾರರು ತಮ್ಮ ಜಾಹೀರಾತುಗಳ ವ್ಯಾಪ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎನ್ನುವುದನ್ನು ಹೈಲೈಟ್ ಮಾಡಿದರು.
ಯಾಕೆ: ಸಾಂಪ್ರದಾಯಿಕ ಸಾಮಾಜಿಕ ಮಾಧ್ಯಮಕ್ಕೆ ನಾವು ಅಪವಾದವಾಗಿದ್ದೇವೆ ಏಕೆಂದರೆ ನಮಗೆ ಅತ್ಯಂತ ಆತ್ಮೀಯರಾಗಿರುವವರೊಂದಿಗೆ ನಮ್ಮ ಪರಿಪೂರ್ಣವಾದ ಅಪರಿಪೂರ್ಣ ಕ್ಷಣಗಳನ್ನು ನಾವು ಮುಕ್ತವಾಗಿ ಹಂಚಿಕೊಳ್ಳಬಹುದು."
“Snapchat ಒಂದು ಅಧಿಕೃತ ವಾತಾವರಣವಾಗಿದೆ. ಒಂದು ಖಾಸಗಿ ವಾತಾವರಣ. ಮತ್ತು ಇವುಗಳಲ್ಲಿ ಎಲ್ಲವುಗಳಿಗಿಂತ ಉತ್ತಮ ಎಂದರೆ, ಇದು ಸಂತೋಷದ ವಾತಾವರಣವಾಗಿದೆ. ವಾಸ್ತವದಲ್ಲಿ, Snapchat ಬಳಸುವಾಗ 91% ಅಗಾಧ ಪ್ರಮಾಣದ Snapchatter ಗಳು ಸಂತಸದಿಂದಿರುತ್ತಾರೆ ಮತ್ತು ನಮ್ಮ ಸ್ಪರ್ಧಿಗಳಿಗೆ ಹೋಲಿಸಿದರೆ ಇದು ಅತ್ಯಂತ ಸಂತಸದಾಯಕ ವೇದಿಕೆಯಾಗಿದೆ."
"Snapchat ನಲ್ಲಿ ಬ್ರ್ಯಾಂಡ್‌ಗಳು ನೈಜ ಪ್ರಭಾವವನ್ನು ಹೊಂದಿರುವ ವಾತಾವರಣವನ್ನು ನೈಜ ಸಂಬಂಧಗಳು ಸೃಷ್ಟಿಸುತ್ತವೆ... ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಕಥೆಗಳ ಪಕ್ಕದಲ್ಲಿ Snap ಜಾಹೀರಾತುಗಳು ಕಾಣಿಸಿದಾಗ ಅಥವಾ ಒಬ್ಬ ಸ್ನೇಹಿತನಿಂದ ಸ್ಟಾರ್‌ಬಕ್ಸ್ ಲೆನ್ಸ್‌ನೊಂದಿಗೆ ನಿಮಗೆ ಒಂದು Snap ಕಳುಹಿಸಲ್ಪಟ್ಟಾಗ, ಆ ಸಂದೇಶವನ್ನು ನೀವು ಹೆಚ್ಚು ಸ್ವೀಕರಿಸುತ್ತೀರಿ ಮತ್ತು ಶಿಫಾರಸು ಒಂದಿಷ್ಟು ಭಿನ್ನ ರೀತಿಯಲ್ಲಿ ಪ್ರಭಾವ ಬೀರುತ್ತದೆ. ಈ ಕಾರಣಕ್ಕೆ Snapchat ಜಾಹೀರಾತುಗಳು ಇತರ ವೇದಿಕೆಗಳ ತುಲನೆಯಲ್ಲಿ ಹೆಚ್ಚಿಸಿದ ಪ್ರಸ್ತುತತೆಯನ್ನು ಒದಗಿಸುತ್ತವೆ, ಇದರಿಂದಾಗಿ Snapchatter ಗಳು 45% ಹೆಚ್ಚು ಸಂಭಾವ್ಯತಃ ಬ್ರ್ಯಾಂಡ್‌ಗಳನ್ನು ಶಿಫಾರಸು ಮಾಡುವ ಸಾಧ್ಯತೆಯಿದೆ ಮತ್ತು ಜಾಹೀರಾತಿನಲ್ಲಿರುವ ಉತ್ಪನ್ನಗಳನ್ನು ಖರೀದಿಸುವ ಸಾಧ್ಯತೆ 34% ನಷ್ಟು ಹೆಚ್ಚಿದೆ."
ಯಾವಾಗ: "ಮೂರು ಪ್ರಮುಖ ಕ್ಷಣಗಳು Snapchat ನಲ್ಲಿ ಸಂಭವಿಸುತ್ತವೆ: ಬಿಡುಗಡೆಗಳು, ಟೆಂಟ್‌ಪೋಲ್‌ಗಳು ಮತ್ತು ಪ್ರತಿದಿನದ ಕ್ಷಣಗಳು."
"ತಮ್ಮ ದೈನಂದಿನ ಬದುಕು ನಿಜವಾಗಿ ಹೇಗಿದೆಯೋ ಅದನ್ನು — ಅಂದರೆ ದೊಡ್ಡ ಮತ್ತು ಸಣ್ಣ ಕ್ಷಣಗಳೆರಡನ್ನೂ ಹಂಚಿಕೊಳ್ಳಲು ಜನರು ಆನಂದಿಸುವ #1 ವೇದಿಕೆ Snapchat ಆಗಿದೆ. ವಾಸ್ತವದಲ್ಲಿ, ಪ್ರಮುಖ ಮಾರುಕಟ್ಟೆಗಳಲ್ಲಿ Snapchat ನಲ್ಲಿನ ನಮ್ಮ ಅಗ್ರ ದಿನಗಳ ಬಹುತೇಕ 40%, ಪ್ರಮುಖ ರಜಾದಿನ ಅಥವಾ ಕ್ಷಣದೊಂದಿಗೆ ಸಂಬಂಧಿತವಾಗಿಲ್ಲ. ಯಾವಾಗಲೂ-ಆನ್ ಕಾರ್ಯನೀತಿ ಹೊಂದಿರುವ ಬ್ರ್ಯಾಂಡ್‌ಗಳಿಗೆ ಇದು ಉತ್ತಮ ಸಂಪರ್ಕ ಒದಗಿಸುತ್ತದೆ. ನಮ್ಮ ಕಮ್ಯುನಿಟಿ ಅವರ ದೈನಂದಿನ ಲಯಗಳನ್ನು ಹಂಚಿಕೊಳ್ಳುತ್ತಿರುವಂತೆ, ಬ್ರ್ಯಾಂಡ್‌ಗಳೂ ಕೂಡ ತಮ್ಮ ಸಂಭಾವ್ಯ ಗ್ರಾಹಕರಿಗೆ ಸಣ್ಣ ಆದರೆ ಪರಿಣಾಮಕಾರಿ ವಿಧಾನಗಳಲ್ಲಿ ಸಂತೋಷವನ್ನು ತರಬಹುದು."
ಹೇಗೆ: "ಸರಳವಾಗಿ ಹೇಳುವುದಾದರೆ, Snapchat ನಲ್ಲಿ ಬ್ರ್ಯಾಂಡ್‌ಗಳು ಎರಡು ರೀತಿಯಲ್ಲಿ ಜಾಹೀರಾತು ನೀಡುತ್ತವೆ: ಪೂರ್ಣ-ಸ್ಕ್ರೀನ್ ವೀಡಿಯೊ ಫಾರ್ಮ್ಯಾಟ್‌ಗಳೊಂದಿಗೆ ಮತ್ತು ತಲ್ಲೀನಗೊಳಿಸುವ ವರ್ಧಿತ ವಾಸ್ತವದೊಂದಿಗೆ. ಇವು ಗಮನ-ಸೆಳೆಯುವ ಜಾಹೀರಾತು ಸ್ವರೂಪಗಳಾಗಿದ್ದು ಕಾರ್ಯಕ್ಷಮತೆಯನ್ನೂ ಚಾಲಿತಗೊಳಿಸುತ್ತವೆ ಮತ್ತು ಅವು ಯಾವಾಗಲೂ ಉನ್ನತ ಗುಣಮಟ್ಟ ಹಾಗೂ ತೊಡಗಿಕೊಳ್ಳುವಂಥವಾಗಿರುತ್ತವೆ."
"Snapchat ನ ಲಂಬ ವೀಡಿಯೊಗಳನ್ನು ಗಮನಿಸಿ: ಅವು ಸಾಮಾಜಿಕ ವೀಡಿಯೊ ವಾಡಿಕೆಗೆ ಹೋಲಿಸಿದರೆ 5 ಪಟ್ಟು ಹೆಚ್ಚು ಗಮನವನ್ನು ಸೆಳೆಯುತ್ತವೆ. ಏಕೆಂದರೆ Snapchat, ಬ್ರ್ಯಾಂಡ್‌ಗಳು ತಮ್ಮ ಕಥೆಯನ್ನು ಬ್ರ್ಯಾಂಡ್-ಸುರಕ್ಷಿತವಾದ, ಕ್ಯೂರೇಟ್ ಮಾಡಿದ ಮತ್ತು ವಿಶ್ವಾಸಾರ್ಹ ವಾತಾವರಣದಲ್ಲಿ ಹೇಳಲು ಅವಕಾಶ ಕಲ್ಪಿಸುತ್ತದೆ, ಇಲ್ಲಿ ನಾವು ಗಮನಿಸಿದಂತೆ, Snapchatter ಗಳು ಸಂತೋಷದಿಂದಿರುತ್ತಾರೆ ಮತ್ತು ಸಂದೇಶಗಳಿಗೆ ಹೆಚ್ಚು ಸ್ವೀಕಾರಾರ್ಹ ಮನಸ್ಥಿತಿ ಹೊಂದಿರುತ್ತಾರೆ."
"ಬ್ರ್ಯಾಂಡ್‌ಗಳು ನೈಜ ಯಶಸ್ಸನ್ನು ಕಾಣುತ್ತಿವೆ [ನಮ್ಮ AR ಲೆನ್ಸ್‌ಗಳೊಂದಿಗೆ]. ಉದಾಹರಣೆಗೆ, Snapchat ನ ವರ್ಧಿತ ವಾಸ್ತವ ಲೆನ್ಸ್‌ಗಳು Dentsu ದ ಬೆಂಚ್‌ಮಾರ್ಕ್‌ಗಿಂತ 4 ಪಟ್ಟು ಹೆಚ್ಚು ಗಮನವನ್ನು ಸೆಳೆದವು."
"ಅಲ್ಪಕಾಲಿಕ ಫಲಿತಾಂಶಗಳನ್ನು ತಲುಪಿಸುವಾಗ ಬ್ರ್ಯಾಂಡ್‌ಗಳು ತಮ್ಮ ದೀರ್ಘಕಾಲಿಕ ಗುರಿಗಳನ್ನು ಸಾಧಿಸಲು ಸಹಾಯ ಮಾಡುವುದಕ್ಕಾಗಿ Snapchat ಅನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಶಕ್ತಿಶಾಲಿ ಮತ್ತು ಕ್ರಿಯೇಟಿವ್ ಆದ ಜಾಹೀರಾತು ಪರಿಹಾರಗಳ ಗುಚ್ಛದೊಂದಿಗೆ ನಾವು ಅವುಗಳನ್ನು ಸರಿಯಾದ ಪ್ರೇಕ್ಷಕರಿಗೆ ಕನೆಕ್ಟ್ ಮಾಡುತ್ತೇವೆ. ಇವೆಲ್ಲವೂ ನನ್ನಂತಹ CMO ಗಳು ರಾತ್ರಿ ನೆಮ್ಮದಿಯಿಂದ ನಿದ್ರೆ ಮಾಡಲು ಸಹಾಯ ಮಾಡುತ್ತವೆ."
ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಜೆರ್ರಿ ಹಂಟರ್ ಅವರು ನಮ್ಮ ಜಾಹೀರಾತುದಾರರಿಗೆ ಎಂಜಿನಿಯರಿಂಗ್ ಮತ್ತು ಮಾರಾಟ ಎರಡನ್ನೂ ಮುನ್ನಡೆಸಲು ನಾವು ಹೇಗೆ ವಿಕಸನಗೊಳಿಸುತ್ತಿದ್ದೇವೆ ಎನ್ನುವುದನ್ನು ವಿವರವಾಗಿ ಚರ್ಚಿಸಿದರು.
"ಆದಾಯದ ಬೆಳವಣಿಗೆಯನ್ನು ವೇಗವರ್ಧಿಸಲು ನಮ್ಮ ಆದ್ಯತೆ ಸರಳವಾಗಿದೆ: ಸದ್ಯದಲ್ಲೇ ನೇರ ಪ್ರತಿಕ್ರಿಯೆ ಕಾರ್ಯಕ್ಷಮತೆಯ ಮೇಲೆ ಹೆಚ್ಚಿನ ಒತ್ತುನೀಡುವಿಕೆಯೊಂದಿಗೆ, ನಮ್ಮ ಜಾಹೀರಾತು ಪಾಲುದಾರರಿಗೆ ಅಳೆಯಬಹುದಾದ ಮೌಲ್ಯ ಮತ್ತು ಸಕಾರಾತ್ಮಕ ವ್ಯವಹಾರ ಫಲಿತಾಂಶಗಳನ್ನು ತಲುಪಿಸುವುದು."
"ತುಂಬಾ ದೊಡ್ಡ ಮತ್ತು ಬೆಳೆಯುತ್ತಿರುವ ಡಿಜಿಟಲ್ ಜಾಹೀರಾತು ಡಾಲರ್‌ಗಳಲ್ಲಿ ಪಾಲು ಗಳಿಸಲು, ನಾವು ಕೆಲವು ಸಂಗತಿಗಳ ಮೇಲೆ ಗಮನ ಕೇಂದ್ರೀಕರಿಸಲಿದ್ದೇವೆ.... 1) ಬೇರೆ ಕಡೆ ತಲುಪಲು ಕಷ್ಟಕರವಾದ ಬೃಹತ್ ಮತ್ತು ತೊಡಗಿಕೊಂಡ ಪ್ರೇಕ್ಷಕರನ್ನು ಜಾಹೀರಾತುದಾರರಿಗೆ ಒದಗಿಸುವುದು, 2) ಬ್ರ್ಯಾಂಡ್ ಸುರಕ್ಷಿತ ವಾತಾವರಣದಲ್ಲಿ ಸಮ್ಮೋಹಕ, ಕಾರ್ಯಕ್ಷಮತೆಯುಳ್ಳ ಜಾಹೀರಾತು ಸ್ವರೂಪಗಳನ್ನು ಒದಗಿಸುವುದು ಮತ್ತು 3) ನಮ್ಮ ಜಾಹೀರಾತು ಪಾಲುದಾರರಿಗೆ ಜಾಹೀರಾತು ವೆಚ್ಚದ ಮೇಲೆ ಆಕರ್ಷಕ ಆದಾಯವನ್ನು ತಲುಪಿಸಲು ಅಭಿಯಾನಗಳನ್ನು ಆಪ್ಟಿಮೈಸ್ ಮಾಡುವ ಸಾಮರ್ಥ್ಯದ ಜಾಹೀರಾತು ವೇದಿಕೆಯನ್ನು ಒದಗಿಸುವುದು."
"ಅಳೆಯಬಹುದಾದ ಜಾಹೀರಾತುದಾರ ಫಲಿತಾಂಶಗಳನ್ನು ಇನ್ನಷ್ಟು ದಕ್ಷವಾಗಿ ಮುನ್ನಡೆಸಲು, ನಾವು ಆಪ್ಟಿಮೈಜೇಷನ್, ಮಾಪನ ಮತ್ತು ನಿರ್ದಿಷ್ಟವಾಗಿ ಜಾಹೀರಾತು ಶ್ರೇಯಾಂಕದಲ್ಲಿ ಹೆಚ್ಚು ತುರುಸಿನಿಂದ ಹೂಡಿಕೆ ಮಾಡುತ್ತಿದ್ದೇವೆ. ಈ ರೀತಿಯಲ್ಲಿ, ನಾವು CPM ಅನ್ನು ಹೆಚ್ಚಿಸಬಹುದು ಮತ್ತು ಏಕಕಾಲಕ್ಕೆ ROI ಅನ್ನು ಹೆಚ್ಚಿಸಬಹುದು."
"ಸದ್ಯದಲ್ಲಿ ನಮ್ಮ ಪ್ರಾಥಮಿಕ ಗಮನವು ನೇರ ಪ್ರತಿಕ್ರಿಯೆ ಜಾಹೀರಾತು ನೀಡುವಿಕೆ ಅಥವಾ DR. ಇಂದು DR ನಮ್ಮ ಜಾಹೀರಾತು ವ್ಯವಹಾರದ ಸರಿಸುಮಾರು ಮೂರನೇ ಎರಡು ಭಾಗವನ್ನು ಪ್ರತಿನಿಧಿಸುತ್ತದೆ ಮತ್ತು ನಮ್ಮ ಬ್ರ್ಯಾಂಡ್-ಅಭಿಮುಖವಾದ ವ್ಯವಹಾರಕ್ಕಿಂತ ವೇಗವಾದ ದರದಲ್ಲಿ ಬೆಳವಣಿಗೆಯನ್ನು ಮುಂದುವರಿಸಿದೆ. DR ಪುಟಿದೇಳುವಂಥದ್ದಾಗಿದೆ ಎಂದು ನಾವು ನಂಬಿದ್ದೇವೆ ಏಕೆಂದರೆ ಇದು ತಮ್ಮ ವೆಚ್ಚದಲ್ಲಿ ಅಧಿಕ ಮಟ್ಟದ ಆತ್ಮವಿಶ್ವಾಸದ ಅಗತ್ಯ ಇರುವ ಜಾಹೀರಾತುದಾರರಿಗೆ ಅತಿ ಹೆಚ್ಚು ಅಳೆಯಬಹುದಾದ ROI ಒದಗಿಸುತ್ತದೆ."
" ಗೌಪ್ಯತೆ ಸುರಕ್ಷಿತ ಮಾದರಿಯಲ್ಲಿ ವೇದಿಕೆ ನೀತಿ ಬದಲಾವಣೆಗಲಿಮದ ವಿಧಿಸಲಾದ ಮಿತಿಗಳನ್ನು ಮೀರಲು, ನಮ್ಮ ಜಾಹೀರಾತು ವೇದಿಕೆಯನ್ನು ಮೂರು ಪ್ರಮುಖ ಕ್ಷೇತ್ರಗಳಲ್ಲಿ ನಾವು ಅಪ್‌ಡೇಟ್ ಮಾಡುತ್ತಿದ್ದೇವೆ ಮತ್ತು ಸುಧಾರಣೆ ಮಾಡುತ್ತಿದ್ದೇವೆ: 1) ಗಮನಿಸುವಿಕೆ ಮತ್ತು ಮಾಪನದಲ್ಲಿ ಹೂಡಿಕೆ ಮಾಡುವುದು 2) ತೊಡಗಿಕೊಳ್ಳುವಿಕೆ ಮತ್ತು ಸಂಭಾಷಣೆಗಳ ಗುಣಮಟ್ಟವನ್ನು ಸುಧಾರಿಸುವುದು ಮತ್ತು 3) ಉನ್ನತ ಮಟ್ಟದ ತೊಡಗಿಕೊಳ್ಳುವಿಕೆಗಳು ಮತ್ತು ಸಂಭಾಷಣೆಗಳನ್ನು ಹೆಚ್ಚಿಸುವುದು."
"ಸಂಭಾಷಣೆಗಳ API ಅಳವಡಿಕೆ ತುಂಬ ಚೆನ್ನಾಗಿ ಬೆಳೆಯುತ್ತಿದೆ ಮತ್ತು ನಮ್ಮ ಆದಾಯದ ಬಹುಪಾಲನ್ನು ಈಗ ಸಂಭಾಷಣೆಗಳ API, Pixel ಏಕೀಕರಣಗಳು, SKAN ಅಥವಾ MMP ಗಳಿಂದ ಸಂಕೇತಗಳನ್ನು ಬಳಸಿಕೊಂಡು ಅಳೆಯಲಾಗುತ್ತಿದೆ."
"30% ಗಿಂತ ಹೆಚ್ಚು ಆದಾಯವನ್ನು ಅಂದಾಜು ಪರಿವರ್ತನೆಗಳು ಮೂಲಕ ಅಳೆಯಲಾಗುತ್ತಿದ್ದು, ಇದು ವೆಬ್-ಆಧರಿತ DR ಜಾಹೀರಾತುದಾರರು ಮತ್ತು ಆ್ಯಪ್ ಆಧರಿತ ಜಾಹೀರಾತುದಾರರು ಇಬ್ಬರನ್ನೂ SKAN ಮೂಲಕ ಒಳಗೊಳ್ಳುತ್ತದೆ."
"ತೊಡಗಿಕೊಳ್ಳುವಿಕೆ ಮತ್ತು ಸಂಭಾಷಣೆಗಳ ಗುಣಮಟ್ಟವನ್ನು ವರ್ಧಿಸಲು ನಾವು ಕೆಲಸ ಮಾಡುತ್ತಿದ್ದೇವೆ... ಈ ಬದಲಾವಣೆಗಳು ಜಾಹೀರಾತುದಾರರಿಗೆ ಇನ್ನಷ್ಟು ಉತ್ತಮ ಕೊನೆಯ-ಕ್ಲಿಕ್ ಸಂಭಾಷಣೆ ಕಾರ್ಯಕ್ಷಮತೆಯನ್ನು ಮತ್ತು Snapchatter ಗಳಿಗೆ ಇನ್ನಷ್ಟು ಉತ್ತಮ ಕ್ಲಿಕ್-ನಂತರದ ಅನುಭವಗಳನ್ನು ಒದಗಿಸುತ್ತವೆ. ಉದಾಹರಣೆಗೆ, ತೊಡಗಿಕೊಳ್ಳುವಿಕೆ, ತಲುಪುವಿಕೆ ಮತ್ತು ಲೀಡ್‌ಗಳಿಗೆ ಸಂಬಂಧಿಸಿ ಆಪ್ಟಿಮೈಸ್ ಮಾಡಿದ ಅಭಿಯಾನಗಳಿಗೆ, ಸುಧಾರಿತ ಕ್ಲಿಕ್ ಗುಣಮಟ್ಟವು ಕ್ಲಿಕ್-ನಂತರದ ವೀಕ್ಷಣಾ ಸಮಯದಲ್ಲಿ 40% ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು Google Analytics ಸೆಷಲ್ ಹೋಲಿಕೆ ದರದಲ್ಲಿ ಸುಮಾರು 15% ಏರಿಕೆಯಾಗಿದೆ. ಮತ್ತು ಹೆಚ್ಚು ಪ್ರಸ್ತುತವಾದ ಜಾಹೀರಾತುಗಳನ್ನು ತಲುಪಿಸಲು ವಿನ್ಯಾಸಗೊಳಿಸಲಾದ ನಮ್ಮ ML ಮಾಡೆಲ್ ಅಪ್‌ಡೇಟ್‌ಗಳು, ಜಾಹೀರಾತು ವೀಕ್ಷಣೆ ಸಮಯದಲ್ಲಿ 40% ಗೂ ಹೆಚ್ಚು ಸುಧಾರಣೆಗೆ ಮತ್ತು ನಾನ್-ಬೌನ್ಸ್ ದರಗಳಲ್ಲಿ 25% ಏರಿಕೆಗೆ ಕಾರಣವಾಗಿದೆ." 
"ನಮ್ಮ AR ಜಾಹೀರಾತು ಅವಕಾಶವನ್ನು ಪೂರ್ಣವಾಗಿ ವಾಸ್ತವಗೊಳಿಸಲು, ಪರಿಸರ ವ್ಯವಸ್ಥೆಯನ್ನು ಬೆಳೆಸುವ ವಿಧಾನಗಳನ್ನು ಈಗ ನಾವು ಗುರುತಿಸುತ್ತಿದ್ದೇವೆ – AR ಅನ್ನು ಬ್ರ್ಯಾಂಡ್‌ಗಳ ಗೋ-ಟು-ಮಾರ್ಕೆಟ್ ಕಾರ್ಯನೀತಿಗಳೊಂದಿಗೆ ಏಕೀಕರಿಸಲು ಹೊಸ, ಅಳೆಯಬಹುದಾದ ಮಾರ್ಗಗಳನ್ನು ಕಂಡುಕೊಳ್ಳಲು WPP, Publicis ಮತ್ತು Denstu ನಂತಹ ಮಾಧ್ಯಮ ಏಜೆನ್ಸಿಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವುದು. ಮತ್ತು AR ಜಾಹೀರಾತುಗಳನ್ನು ಸೃಷ್ಟಿಸಲು, ನಿರ್ವಹಿಸಲು ಮತ್ತು ನಿಯೋಜಿಸಲು ನಾವು ಅದನ್ನು ಹಿಂದೆಂದಿಗಿಂತಲೂ ಸುಲಭವಾಗಿಸುತ್ತಿದ್ದೇವೆ – 3D ಮತ್ತು AR ಸ್ವತ್ತುಗಳನ್ನು ಸೃಷ್ಟಿಸಲು, ನಿರ್ವಹಿಸಲು ಮತ್ತು ನಿಯೋಜಿಸಲು ಬ್ಯಾಕೆಂಡ್ ಸಿಸ್ಟಂ ಒದಗಿಸುವ Vertebrae ರೀತಿಯ ಸ್ವಾಧೀನಗಳ ಮೂಲಕ."
"ಪ್ರತಿ ಬಳಕೆದಾರರಿಗೆ ನಮ್ಮ ಸರಾಸರಿ ಆದಾಯವನ್ನು ಬೆಳೆಸುವುದನ್ನು ಮುಂದುವರಿಸುವ ಕುರಿತು ಮಧ್ಯಮಾವಧಿಯಲ್ಲಿ ನಾವು ಯೋಚಿಸುತ್ತಿರುವಂತೆ, Snap ಮ್ಯಾಪ್‌ನಂತಹ ನಮ್ಮ ಹೆಚ್ಚಿನ ವೇದಿಕೆಗಳಾದ್ಯಂತ Snapchatter ಗಳನ್ನು ತಲುಪಲು ಜಾಹೀರಾತುದಾರರಿಗೆ ಸಹಾಯ ಮಾಡಲು ನಾವು ಭಿನ್ನ ವಿಧಾನಗಳತ್ತ ಗಮನ ಹರಿಸಲಿದ್ದೇವೆ ಹಾಗೂ ಖಂಡಿತವಾಗಿ, ಬಹಳ ವೇಗವಾಗಿ ಬೆಳೆಯುತ್ತಿರುವ ಸ್ಪಾಟ್‌ಲೈಟ್ ಅನ್ನು ನಗದೀಕರಿಸುವ ಮೂಲಕ ಇನ್ನೂ ಹೆಚ್ಚಿನ ಇನ್ವೆಂಟರಿಯನ್ನು ತೆರೆಯುತ್ತಿದ್ದೇವೆ."
"ಎಂಜಿನಿಯರಿಂಗ್ ಮತ್ತು ಉತ್ಪನ್ನ ತಂಡಗಳು ಆದಾಯ-ಸೃಷ್ಟಿಯ ವೈಶಿಷ್ಟ್ಯಗಳನ್ನು ಮಾರುಕಟ್ಟೆಗೆ ತರುತ್ತಿವೆ, ಆದರೆ ನಮ್ಮ ಗ್ರಾಹಕರೊಂದಿಗೆ ನಾವು ಕಟ್ಟುನಿಟ್ಟಿನ ಪ್ರತಿಕ್ರಿಯೆ ಸರಣಿಯನ್ನು ಹೊಂದಿಲ್ಲ. ಇವು ತಾಂತ್ರಿಕ ಅನುಷ್ಠಾನಗಳಾಗಿದ್ದು ನಮ್ಮ ಗ್ರಾಹಕರು ಅತ್ಯುತ್ತಮ ಫಲಿತಾಂಶಗಳನ್ನು ಪಡೆಯುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಲು ಸಾಮಾನ್ಯವಾಗಿ ಟ್ಯೂನಿಂಗ್ ಮತ್ತು ಮಾರ್ಪಾಡುಗಳ ಅಗತ್ಯವಿರುತ್ತದೆ. ಪ್ರತಿಕ್ರಿಯೆಗಳ ಸರಣಿಯನ್ನು ಕಟ್ಟುನಿಟ್ಟಾಗಿಸುವ ಪ್ರಕ್ರಿಯೆಗಳು ಮತ್ತು ತಂಡಗಳಲ್ಲಿ ಹೂಡಿಕೆ ಮಾಡುವ ಮೂಲಕ, ಉತ್ಪನ್ನವನ್ನು ಹೆಚ್ಚು ತ್ವರಿತವಾಗಿ ಸುಧಾರಿಸಲು ನಮಗೆ ಸಾಧ್ಯವಾಗುತ್ತದೆ."
"ನೀವು ಗಮನಿಸಬೇಕಾದ ಒಂದು ಅಂಶವೇನೆಂದರೆ, ನಾವು ನಮ್ಮ ಜಾಹೀರಾತು ವೇದಿಕೆಯನ್ನು ವಿಕಸನಗೊಳಿಸುತ್ತಿದ್ದೇವೆ ಮತ್ತು ಇದು ಆರಂಭಿಕ ದಿನಗಳಾಗಿದ್ದರೂ ಸಹ ನಾವು ಈಗಾಗಲೇ ಪ್ರಬಲ ಫಲಿತಾಂಶಗಳನ್ನು ಕಾಣುತ್ತಿದ್ದೇವೆ."
ಸಹಸಂಸ್ಥಾಪಕ ಮತ್ತು ಮುಖ್ಯ ತಾಂತ್ರಿಕ ಅಧಿಕಾರಿ, ಬಾಬಿ ಮರ್ಫಿ ಅವರು, ವರ್ಧಿತ ವಾಸ್ತವದಲ್ಲಿ ನಮ್ಮ ಮುನ್ನಡೆಯನ್ನು ನಾವು ಹೇಗೆ ವೇಗವರ್ಧಿಸುತ್ತಿದ್ದೇವೆ, AR ನಲ್ಲಿ ನಮ್ಮ ಪ್ರತಿಯೊಂದು ಹೂಡಿಕೆ ಹೇಗೆ ಹೊಂದಿಕೆಯಾಗುತ್ತವೆ ಮತ್ತು AR ನ ಭವಿಷ್ಯದ ಕುರಿತು ನಾವು ಯಾಕೆ ಅಷ್ಟೊಂದು ರೋಮಾಂಚಿತರಾಗಿದ್ದೇವೆ ಎನ್ನುವುದನ್ನು ವಿವರಿಸಿದರು.
"ವರ್ಧಿತ ವಾಸ್ತವ ಕಂಪ್ಯೂಟಿಂಗ್‌ನಲ್ಲಿ ಮುಂದಿನ ಪ್ರಮುಖ ಬದಲಾವಣೆಯನ್ನು ಪ್ರತಿನಿಧಿಸುತ್ತದೆ ಎಂದು ನಾವು ನಂಬಿದ್ದೇವೆ. AR ನಮ್ಮ ಸುತ್ತಲಿನ ಜಗತ್ತಿನೊಳಗೆ ಡಿಜಿಟಲ್ ಅನುಭವಗಳನ್ನು ನೇಯ್ಗೆ ಮಾಡಲು ನಮಗೆ ಅವಕಾಶ ಕಲ್ಪಿಸುತ್ತದೆ, ಈ ಮೂಲಕ ನಮ್ಮ ದೈನಂದಿನ ಬದುಕಿನಲ್ಲಿ ನಾವು ಕಂಪ್ಯೂಟಿಂಗ್ ಬಳಸುವ ವಿಧಾನಗಳನ್ನು ವಿಕಸನಗೊಳಿಸುತ್ತದೆ."
"ನಮ್ಮ AR ಉತ್ಪನ್ನಗಳು ಮತ್ತು ಸೇವೆಗಳು ಅಳೆಯಬಹುದಾದ ಪ್ರಮಾಣದಲ್ಲಿ ಇಂದು ಪ್ರಮುಖ ಪ್ರಭಾವಗಳನ್ನು ಮುನ್ನಡೆಸುತ್ತಿವೆ — ಸರಾಸರಿ 250 ಮಿಲಿಯನ್‌ಗೂ ಅಧಿಕ ಜನರು ಪ್ರತಿ ದಿನ Snapchat ನಲ್ಲಿ ವರ್ಧಿತ ವಾಸ್ತವದೊಂದಿಗೆ ತೊಡಗಿಕೊಳ್ಳುತ್ತಾರೆ. ನಮ್ಮ ಸಮುದಾಯ ದಿನಕ್ಕೆ ಸರಾಸರಿ ಬಿಲಿಯನ್‌ಗಟ್ಟಲೆ ಬಾರಿ AR ಲೆನ್ಸ್‌ಗಳೊಂದಿಗೆ ಆಟವಾಡುತ್ತದೆ. ಮತ್ತು ನಮ್ಮ AR ಕ್ರಿಯೇಟರ್ ಕಮ್ಯುನಿಟಿ ನಮ್ಮ Lens Studio ಸಾಫ್ಟ್‌ವೇರ್ ಬಳಸಿಕೊಂಡು 3 ಮಿಲಿಯನ್‌ಗೂ ಅಧಿಕ ಲೆನ್ಸ್‌ಗಳನ್ನು ನಿರ್ಮಿಸಿದೆ."
"ಈ ವಿಶಿಷ್ಟ ಸ್ಥಾನವು ವಿಶ್ವದ ಅತಿ ಹೆಚ್ಚು ಬಳಸಲ್ಪಡುವ ಕ್ಯಾಮೆರಾಗಳನ್ನು ಸನ್ನೆಯಾಗಿಸಿಕೊಂಡು ಕಳೆದ ದಶಕದಲ್ಲಿ ವರ್ಧಿತ ವಾಸ್ತವದಲ್ಲಿ ಮುನ್ನಡೆಯನ್ನು ಕಂಡುಕೊಳ್ಳಲು, ಸುಧಾರಿತ ತಂತ್ರಜ್ಞಾನಗಳು ಮತ್ತು ಟೂಲ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು ಸ್ಪಂದನಶೀಲ AR ಕ್ರಿಯೇಟರ್ ಪರಿಸರವ್ಯವಸ್ಥೆಯನ್ನು ಬೆಳೆಸಲು ನಮಗೆ ಅವಕಾಶ ಕಲ್ಪಿಸಿದೆ."
"ಮುಂದಿನ ಐದು ವರ್ಷಗಳತ್ತ ನಾವು ದೃಷ್ಟಿ ಹರಿಸುತ್ತಿರುವಂತೆ, ಕ್ಯಾಮೆರಾ ಕಿಟ್‌ನೊಂದಿಗೆ ನಾವು ನಮ್ಮ ಆರಂಭಿಕ ಯಶಸ್ಸನ್ನು ಮುನ್ನಡೆಸುತ್ತೇವೆ ಮತ್ತು AR ಮೂಲಕ ತಮ್ಮ ವ್ಯವಹಾರದ ಅಗತ್ಯಗಳನ್ನು ಪರಿಹರಿಸಿಕೊಳ್ಳಲು ಕಂಪನಿಗಳು, ಡೆವಲಪರ್‌ಗಳು ಮತ್ತು ಉದ್ಯಮಿಗಳಿಗೆ ಅವಕಾಶ ಕಲ್ಪಿಸುವ ಮೂಲಕ Snapchat ನ ಆಚೆಗೂ ವ್ಯವಹಾರವನ್ನು ಸೃಷ್ಟಿಸುತ್ತೇವೆ."
"AR ಇಂದು ನಮ್ಮ ಮೊಬೈಲ್ Snapchat ಅನುಭವದ ಅಗಾಧ ಭಾಗವಾಗಿದೆ ಮತ್ತು ಕಾಲಕ್ರಮೇಣ, ಇನ್ನೊಂದು ಆಯಾಮವನ್ನು ತರಲು ಹೊಸ ಹಾರ್ಡ್‌ವೇರ್‌ಗಾಗಿ ಇನ್ನೂ ಹೆಚ್ಚಿನ ಅವಕಾಶಗಳನ್ನು ನಾವು ಕಾಣುತ್ತೇವೆ. ಇದು ನಮ್ಮ ಧರಿಸಬಹುದಾದ AR ಸಾಧನವಾದ Spectacles ಬೆಳವಣಿಗೆಯನ್ನು ಮುನ್ನಡೆಸುತ್ತಿದೆ. ಧರಿಸಬಹುದಾದ ಸಾಧನಗಳು ಪ್ರಮುಖ ದೀರ್ಘಕಾಲಿಕ ಅವಕಾಶವಾಗಿವೆ ಮತ್ತು ಅತ್ಯಂತ ತೊಡಗಿಕೊಂಡ ಆರಂಭಿಕ ಕ್ರಿಯೇಟರ್‌ಗಳು, ಸುಧಾರಣೆಯಾಗುತ್ತಿರುವ ತಂತ್ರಜ್ಞಾನ ಮತ್ತು ಒಂದು ಅತ್ಯುತ್ತಮವಾದುದನ್ನು, ಅತ್ಯಂತ ಬಳಸಲ್ಪಡಬಹುದಾದುದನ್ನು ಮತ್ತು ಅತ್ಯಂತ ಸಮ್ಮೋಹಕ AR ಸಾಧನವನ್ನು ಹೇಗೆ ಅಭಿವೃದ್ಧಿಪಡಿಸುವುದು ಎನ್ನುವ ಕುರಿತ ಇನ್ನಷ್ಟು ಸ್ಪಷ್ಟ ನೋಟದೊಂದಿಗೆ ನಾವು ಅಸಾಧಾರಣ ಆರಂಭಿಕ ಪ್ರಗತಿಯನ್ನು ಕಾಣುತ್ತಿದ್ದೇವೆ."
ಮುಖ್ಯ ಹಣಕಾಸು ಅಧಿಕಾರಿ, ಡೆರೆಕ್ ಆಂಡರ್‌ಸನ್ ನಮ್ಮ ಕೊನೆಯ ಹೂಡಿಕೆದಾರರ ದಿನದಿಂದ ಈವರೆಗೆ ನಾವು ಸಾಧಿಸಿರುವ ಆರ್ಥಿಕ ಪ್ರಗತಿಯ ಕುರಿತು ಮಾತನಾಡಿದರು ಮತ್ತು ಮುಂಬರುವ ವರ್ಷಗಳಲ್ಲಿ Snap ಗಾಗಿ ಆದಾಯ ಬೆಳವಣಿಗೆಯನ್ನು ವೇಗವರ್ಧಿಸುವ ನಮ್ಮ ಯೋಜನೆಗಳ ಕುರಿತು ಚರ್ಚಿಸಿದರು. 
"ಎರಡು ವರ್ಷಗಳ ಹಿಂದೆ, ಎರಡು ಅಥವಾ ಮೂರು ವರ್ಷಗಳ ಒಳಗೆ, ಮಧ್ಯಮಾವಧಿಯಲ್ಲಿ 60% ನಿವ್ವಳ ಲಾಭಾಂಶವನ್ನು ಗಳಿಸಲು ನಾವು ಯೋಜನೆ ರೂಪಿಸಿದೆವು. ನಾವು ಈ ಗುರಿಯನ್ನು ವೇಳಾಪಟ್ಟಿಗಿಂತ ಮುಂಚಿತವಾಗಿ ಮೀರಿದ್ದೇವೆ ಮತ್ತು ನಮ್ಮ ಬಳಕೆದಾರರ ಬೆಳವಣಿಗೆಯನ್ನು ಹೆಚ್ಚಿಸಿಕೊಳ್ಳುತ್ತ ಹಾಗೂ ಆದಾಯದಲ್ಲಿನ ಇಳಿಕೆಗಳ ಹೊರತಾಗಿಯೂ ಈ ಸಾಧನೆ ಮಾಡಿದ್ದೇವೆ ಎಂದು ತಿಳಿಸಲು ನಾನು ಹೆಮ್ಮೆಪಡುತ್ತೇನೆ."
"ಅಗ್ರಪಂಕ್ತಿಯ ಬೆಳವಣಿಗೆ ಏರಿಕೆಯ ಹಾದಿಯಲ್ಲಿ ಉಳಿದ ಕಾರಣ 2021 ರಲ್ಲಿನ ಕಾರ್ಯಾಚರಣೆ ವೆಚ್ಚಗಳಲ್ಲಿ ನಾವು ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿದೆವು. ಆದರೆ, 2022 ರಲ್ಲಿ ಬೆಳವಣಿಗೆ ನಿಧಾನವಾದಂತೆ, ನಮ್ಮ ನಿರೀಕ್ಷಿತ ಭವಿಷ್ಯದ ವಾರ್ಷಿಕ ಹೊಂದಾಣಿಕೆ ಮಾಡಿದ ಕಾರ್ಯಾಚರಣೆಯ ವೆಚ್ಚಗಳನ್ನು $450 ಮಿಲಿಯನ್‌ನಿಂದ ಮತ್ತು ನಮ್ಮ ಒಟ್ಟಾರೆ ನಗದು ವೆಚ್ಚದ ಸಂರಚನೆಯನ್ನು $500 ಮಿಲಿಯನ್‌ನಿಂದ ಕಡಿಮೆ ಮಾಡಲು ನಮ್ಮ ವೆಚ್ಚದ ಸಂರಚನೆಯನ್ನು ಮರುಆದ್ಯತೆಗೊಳಿಸಲು ನಾವು ತ್ವರಿತವಾಗಿ ಮುಂದುವರಿದೆವು. ಕಳೆದ ಆರು ತಿಂಗಳುಗಳಲ್ಲಿ ನಾವು ಈ ಮರುಆದ್ಯತೆಗೊಳಿಸುವಿಕೆಯನ್ನು ಜಾರಿಗೊಳಿಸಿದ್ದೇವೆ ಮತ್ತು ಈ ವೆಚ್ಚ ಕಡಿತಗಳ ಪೂರ್ಣ ಪ್ರಯೋಜನವನ್ನು 2023 ರ Q1 ರಲ್ಲಿ ಕಾಣುವ ನಿರೀಕ್ಷೆಯನ್ನು ಹೊಂದಿದ್ದೇವೆ."
"2021 ರಲ್ಲಿ, ನಮ್ಮ ಷೇರುಗಳು ಅಂದಾಜು $64 ನಲ್ಲಿ ಟ್ರೇಡ್ ಆಗುತ್ತಿರುವಾಗ, ನಮ್ಮ ಬಾಕಿ ಇರುವ $1.1 ಬಿಲಿಯನ್‌ಗೂ ಹೆಚ್ಚಿನ ಕನ್ವರ್ಟಿಬಲ್ ನೋಟ್‌ಗಳನ್ನು ಕ್ಲಾಸ್ ಎ ಕಾಮನ್ ಸ್ಟಾಕ್ ಆಗಿ ಷೇರುಗಳಿಗೆ ಆರಂಭಿಕ ಪರಿವರ್ತನೆಗಾಗಿ ನಮ್ಮ ಸಾಲಗಾರದೊಂದಿಗೆ ನಾವು ಒಪ್ಪಂದ ಮಾಡಿಕೊಂಡೆವು. ಇದು ನಮ್ಮ ಬಾಕಿ ಇರುವ ಸಾಲವನ್ನು 24 ಬೇಸಿಸ್ ಪಾಯಿಂಟ್‌ಗಳ ಸಮಗ್ರ ಸರಾಸರಿ ಕೂಪನ್ ಮತ್ತು ಭವಿಷ್ಯದಲ್ಲಿ ನಾಲ್ಕು ವರ್ಷಗಳಿಗಿಂತ ಹೆಚ್ಚಿನ ವಾಯಿದೆ ದಿನಾಂಕದ ಸಮಗ್ರ ಸರಾಸರಿ ವಾಯಿದೆ ದಿನಾಂಕದೊಂದಿಗೆ ಈವರೆಗೆ ಅಂದಾಜು $3.7 ಬಿಲಿಯನ್‌ನಷ್ಟು ಕಡಿಮೆ ಮಾಡಿದೆ. ಸತತ ಎರಡು ವರ್ಷಗಳಲ್ಲಿ ಸಕಾರಾತ್ಮಕ ಮುಕ್ತ ನಗದು ಹರಿವು ಸೃಷ್ಟಿಯ ಸಾಧನೆಯ ಜೊತೆಗೆ, ನಮ್ಮ ಬ್ಯಾಲೆನ್ಸ್ ಶೀಟ್‌ನ ಸಾಂಪ್ರದಾಯಿಕ ಮತ್ತು ಅವಕಾಶವಾದಿ ನಿರ್ವಹಣೆಯು, ಐತಿಹಾಸಿಕವಾಗಿ ಕಡಿಮೆ ಮೌಲ್ಯಮಾಪನ ಮಟ್ಟದಲ್ಲಿ ನಮ್ಮದೇ ಷೇರುಗಳನ್ನು ಮರುಖರೀದಿಸಲು $1.0 ಬಿಲಿಯನ್ ಬಂಡವಾಳ ಹೂಡಿಕೆ ಮಾಡುವ ಸ್ಥಿತಿಗೆ ನಮ್ಮನ್ನು ತಲುಪಿಸಿತು. ಡಿಸೆಂಬರ್ 31, 2022 ರ ವೇಳೆಗೆ ನಮ್ಮ ಸಾಮಾನ್ಯ ಷೇರುಗಳ 6.7% ಗೆ ಸಮನಾದ ಷೇರುಗಳನ್ನು ನಾವು ಮರುಖರೀದಿಸಿದ್ದೇವೆ. ಈ ಪ್ರಯತ್ನಗಳ ಫಲವಾಗಿ, ನಮ್ಮ ಪೂರ್ಣವಾಗಿ ಡೈಲ್ಯೂಟ್ ಮಾಡಿದ ಷೇರುಗಳ ಎಣಿಕೆಯ ಬೆಳವಣಿಗೆ ದರವು, ಈ ಹಿಂದೆ ಉಲ್ಲೇಖಿಸಿರುವ ಆರಂಭಿಕ ಪರಿವರ್ತನೆಗಳ I ಕ್ಕಾಗಿ ಹೊಂದಾಣಿಕೆ ಮಾಡಿದ ಬಳಿಕ 2020 ರಲ್ಲಿ 3.4% ನಿಂದ 2021 ರಲ್ಲಿ 1.2%, ನಿಂದ 2022 ರಲ್ಲಿ 0.2% ಗೆ ಇಳಿಕೆಯಾಯಿತು."
ನಾವು ಮುಂದಿನ ದಿನಗಳತ್ತ ನೋಡುತ್ತಿರುವಂತೆ, ಅಗ್ರಪಂಕ್ತಿಯ ಆದಾಯದ ಬೆಳವಣಿಗೆಯ ಕಡಿಮೆ ದರಗಳಲ್ಲೂ ಕೂಡ, ಹೊಂದಾಣಿಕೆ ಮಾಡಿದ EBITDA ಲಾಭದಾಯಕತೆ ಮತ್ತು ಸಕಾರಾತ್ಮಕ FCF ತಲುಪಿಸಲು ನಾವು ಮಾರ್ಗ ನಿರ್ಮಾಣ ಮಾಡಿದ್ದೇವೆ. ಈ ನಿಟ್ಟಿನಲ್ಲಿ ನಾವು ಮಾಡಿರುವ ಕೆಲಸದ ಕುರಿತು ನಾವು ಹೆಮ್ಮೆಪಡುತ್ತೇವೆ — ಮತ್ತು ನಮ್ಮ ಉದ್ಯಮದ ಮೌಲ್ಯದಡಿ ಉನ್ನತ ಮಟ್ಟವನ್ನು ಸ್ಥಾಪಿಸಲು ನಿರ್ಣಾಯಕ ಇನ್‌ಪುಟ್ ಆಗಿದೆ ಎಂದು ನಂಬುತ್ತೇವೆ — ಆದರೆ ಇದು ನಮ್ಮ ಉದ್ಯಮಕ್ಕಾಗಿ ನಮ್ಮ ಮಹತ್ವಾಕಾಂಕ್ಷೆಗಳನ್ನು ಪ್ರತಿಬಿಂಬಿಸುವುದಿಲ್ಲ. ನಮ್ಮ ವ್ಯವಹಾರದ ಪೂರ್ಣ ಹಣಕಾಸು ಸಾಮರ್ಥ್ಯವನ್ನು ಸಾಧಿಸಲು, ನಾವು ಅಗ್ರಪಂಕ್ತಿಯ ಆದಾಯ ಬೆಳವಣಿಗೆಯನ್ನು ವೇಗವರ್ಧಿಸಬೇಕು."
"ಸಮೀಪದ ಅವಧಿಯಲ್ಲಿ, ನಮ್ಮ ಈಗಾಗಲೇ ಅಸಾಧಾರಣ ತಲುಪುವಿಕೆ ಮತ್ತು ಆಳವಾದ ತೊಡಗಿಕೊಳ್ಳುವಿಕೆಯನ್ನು ಇನ್ನಷ್ಟು ಉತ್ತಮವಾಗಿ ಬಳಸಿಕೊಳ್ಲಲು ನಮ್ಮ ನೇರ ಪ್ರತಿಕ್ರಿಯೆ ಜಾಹೀರಾತು ವೇದಿಕೆಯನ್ನು ಸುಧಾರಿಸಲು ನಾವು ಗಮನ ಕೇಂದ್ರೀಕರಿಸಿದ್ದೇವೆ. ಇದಕ್ಕೆ ಸಂಬಂಧಿಸಿ ಬೃಹತ್ ಕ್ಲಯಂಟ್‌ಗಳೊಂದಿಗೆ ಬಲಿಷ್ಠ ಏಕೀಕರಣಗಳು, ಸುಧಾರಿತ ಕ್ಲಿಕ್-ಥ್ರೂ ಕಾರ್ಯಕ್ಷಮತೆ ಮತ್ತು ಅಳೆಯಬಹುದಾದ ಕಾರ್ಯಕ್ಷಮತೆಯ ಮೇಲೆ ಗಮನ ಕೇಂದ್ರೀಕರಿಸಲು ನಮ್ಮ ಮಾಡೆಲ್‌ಗಳನ್ನು ಉಳಿಸಿಕೊಳ್ಳುವ ಮೂಲಕ ನಾವು ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದ್ದೇವೆ."
ಮಧ್ಯಮಾವಧಿಯಲ್ಲಿ, ನಮ್ಮ ಆವಿಷ್ಕಾರದ ಟ್ರ್ಯಾಕ್ ರೆಕಾರ್ಡ್ ನಮ್ಮ ARPU ಅವಕಾಶವನ್ನು ವಿಸ್ತರಿಸಲು ಮತ್ತು ಕಾಲಕ್ರಮೇಣ ನಮ್ಮ ಆದಾಯದ ಮೂಲಗಳನ್ನು ವೈವಿಧ್ಯಮಯಗೊಳಿಸಲು ನಮಗೆ ಸ್ಥಾನ ಕಲ್ಪಿಸುತ್ತದೆ ಎಂದು ನಾವು ನಂಬಿದ್ದೇವೆ. ಉದಾಹರಣೆಗೆ, Snapchat+ Snap ಗೆ ಒಂದು ಸಂಪೂರ್ಣ ಹೊಸ ಆದಾಯ ಮೂಲವನ್ನು ಪ್ರಸ್ತುತಪಡಿಸುತ್ತದೆ ಮತ್ತು ಬಿಡುಗಡೆ ಮಾಡಿದ ಕೇವಲ ಆರು ತಿಂಗಳುಗಳಲ್ಲಿ ಇದು 2.5 ಮಿಲಿಯನ್‌ಗೂ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಮತ್ತು $100 ಮಿಲಿಯನ್‌ಗೂ ಅಧಿಕ ವಾರ್ಷಿಕ ಆದಾಯ ರನ್‌ರೇಟ್ ಅನ್ನು ತಲುಪಿದೆ."
"ನಾವು ಮುಗಿಸುವುದಕ್ಕೆ ಮೊದಲು, ನಾನು ಹೆಜ್ಜೆ ಹಿಂದಿಟ್ಟು ಇಂದು ನಮ್ಮ ತಂಡ ಏನನ್ನು ಪ್ರಸ್ತುತಪಡಿಸಿದೆ ಎನ್ನುವುದರ ವಿಶಾಲ ಚಿತ್ರಣವನ್ನು ಹಾಗೂ ನೀವು ನಿಮ್ಮೊಂದಿಗೆ ಕೊಂಡೊಯ್ಯಲಿದ್ದೀರಿ ಎಂದು ನಾವು ಆಶಿಸುವ ಕೆಲವು ಅತ್ಯಂತ ನಿರ್ಣಾಯಕ ಅಂಶಗಳನ್ನು ನಿಮ್ಮೆದುರು ಇಡಲು ಬಯಸುತ್ತೇನೆ.
  • ನಮ್ಮ ದೃಶ್ಯಾತ್ಮಕ ಸಂವಹನದ ಮೂಲ ಉತ್ಪನ್ನ ವಿಶ್ವದ ಅತ್ಯಂತ ಮೌಲ್ಯಯುತ ಮಾರುಕಟ್ಟೆಗಳಲ್ಲಿ ಹಾಗೂ ಬೇರೆಡೆ ತಲುಪಲು ಅಸಾಧ್ಯವಾದ ಯುವ ಜನಸಮೂಹದಲ್ಲಿ ಗಮನಾರ್ಹ ವ್ಯಾಪ್ತಿಯನ್ನು ತಲುಪಿಸುವುದರೊಂದಿಗೆ 1 ಬಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರ ಕಮ್ಯುನಿಟಿ ನಿರ್ಮಾಣ ಮಾಡುವ ನಮ್ಮ ವಿಧಾನದಲ್ಲಿ ನಾವು ಸಕಾರಾತ್ಮಕವಾಗಿ ಸಾಗುತ್ತಿದ್ದೇವೆ ಎನ್ನುವುದು ಮೊದಲನೆಯ ವಿಷಯ.
  • ಎರಡನೆಯದಾಗಿ, ನಮ್ಮ ಅಗ್ರ ಕಾರ್ಯನೀತಿಯ ಆದ್ಯತೆಗಳು ಪೂರ್ಣವಾಗಿ ಫಂಡ್ ಆಗಿವೆ ಮತ್ತು ಹೊಂದಾಣಿಕೆ ಮಾಡಿದ EBITDA ಲಾಭದಾಯಕತೆಯನ್ನು ಹಾಗೂ ಕಡಿಮೆ ದರದ ಆದಾಯ ಬೆಳವಣಿಗೆಯಲ್ಲೂ ಸಹ ಮುಕ್ತ ನಗದು ಹರಿವನ್ನು ತಲುಪಿಸಲು ಸ್ಪಷ್ಟವಾದ ಮಾರ್ಗವನ್ನು ಹೊಂದಿವೆ ಎನ್ನುವುದನ್ನು ಖಚಿತಪಡಿಸಲು ನಮ್ಮ ಹೂಡಿಕೆಗಳನ್ನು ನಾವು ಮರುಆದ್ಯತೆಗೊಳಿಸಿದ್ದೇವೆ.
  • ಮೂರನೆಯದಾಗಿ, ಸವಾಲಿನ ಕಾರ್ಯಾಚರಣೆ ವಾತಾವರಣದಲ್ಲೂ ಷೇರುಗಳನ್ನು ಪಡೆಯಲು ನಮ್ಮ DR ವ್ಯವಹಾರವನ್ನು ಸುಧಾರಿಸುವ ನಮ್ಮ ಯೋಜನೆಯ ವಿರುದ್ಧ ನಾವು ಕಾರ್ಯನಿರ್ವಹಿಸುತ್ತಿದ್ದೇವೆ.
  • ನಾಲ್ಕನೆಯದಾಗಿ, ಕಂಟೆಂಟ್ ತೊಡಗಿಕೊಳ್ಳುವಿಕೆಯನ್ನು ಮುನ್ನಡೆಸಲು ನಾವು ಆವಿಷ್ಕಾರ ಮಾಡುತ್ತಿದ್ದೇವೆ ಮತ್ತು ಸ್ಪಾಟ್‌ಲೈಟ್, ಕ್ರಿಯೇಟರ್ ಕಥೆಗಳು ಮತ್ತು ಕಮ್ಯುನಿಟಿ ಕಥೆಗಳೊಂದಿಗೆ ನಾವು ಮಾಡುತ್ತಿರುವ ಪ್ರಗತಿಯೊಂದಿಗೆ ಪ್ರಾತ್ಯಕ್ಷಿಕೆ ಮಾಡಿದಂತೆ ಸ್ಪಷ್ಟ ಫಲಿತಾಂಶಗಳನ್ನು ತಲುಪಿಸುವ ಈ ಕಾರ್ಯನೀತಿಯನ್ನು ನೋಡಲು ಪ್ರೋತ್ಸಾಹಿತರಾಗಿದ್ದೇವೆ.
  • ಐದನೆಯದಾಗಿ, Snapchat+ ನ ಗಮನಾರ್ಹ ಆರಂಭಿಕ ಬೆಳವಣಿಗೆಯಿಂದ ಸಾಬೀತುಪಡಿಸಿದಂತೆ, ನಮ್ಮ ಆದಾಯ ಸಂಪನ್ಮೂಲಗಳನ್ನು ವೈವಿಧ್ಯಮಯಗೊಳಿಸುವತ್ತ ತ್ವರಿತ ಪ್ರಗತಿ ಸಾಧಿಸುತ್ತಿದ್ದೇವೆ.
  • ಕೊನೆಯದಾಗಿ, AR ಮುಂದಿನ ಕಂಪ್ಯೂಟಿಂಗ್ ವೇದಿಕೆಯನ್ನು ಮುನ್ನಡೆಸಲಿದೆ ಮತ್ತು ನಮ್ಮ ಪ್ರಮುಖ AR ತಂತ್ರಜ್ಞಾನ, ಸುವ್ಯವಸ್ಥಿತ ಕ್ರಿಯೇಟರ್ ಪರಿಸರವ್ಯವಸ್ಥೆ ಹಾಗೂ AR ಅನುಭವಗಳೊಂದಿಗೆ ಆಳವಾಗಿ ತೊಡಗಿಕೊಂಡ ಸಮುದಾಯದ ನಮ್ಮ ಸಂಯೋಜನೆಯು ಮುಂದಿನ ಕಂಪ್ಯೂಟಿಂಗ್ ವೇದಿಕೆ ಪರಿವರ್ತನೆಯಲ್ಲಿ ನಮ್ಮನ್ನು ನಾಯಕರ ಸಾಲಿನಲ್ಲಿ ನಿಲ್ಲಿಸುತ್ತದೆ."
"ಇಂದಿನ ನಮ್ಮ ಪ್ರಸ್ತುತಿಯನ್ನು ನಾವು ಮುಕ್ತಾಯಗೊಳಿಸುವುದಕ್ಕೆ ಮುನ್ನ, ಒಂದು ಕೊನೆಯ ವಿಚಾರವನ್ನು ನಿಮ್ಮೆದುರು ಇಡಲು ಬಯಸುತ್ತೇವೆ, ಅದೇನೆಂದರೆ ಇಂದು ನಾವಿಲ್ಲಿ ಪ್ರಸ್ತಾಪಿಸಿದ ಎಲ್ಲ ಕಾರ್ಯನೀತಿಯ ಉಪಕ್ರಮಗಳ ತಲುಪಿಸುವಿಕೆಯ ಅತ್ಯಂತ ನಿರ್ಣಾಯಕ ಇನ್‌ಪುಟ್ ಎಂದರೆ ಆವಿಷ್ಕಾರವಾಗಿದೆ. ಅದು ನಮ್ಮ ಉತ್ಪನ್ನಗಳು, ನಮ್ಮ ಜಾಹೀರಾತು ವೇದಿಕೆ ಮತ್ತು AR ನ ಭವಿಷ್ಯವನ್ನು ಆವಿಷ್ಕಾರಗೊಳಿಸುವುದನ್ನು ಒಳಗೊಂಡಿದೆ. ಕಳೆದ 12 ವರ್ಷಗಳ ನಮ್ಮ ಸಾಬೀತುಪಡಿಸಿದ ಆವಿಷ್ಕಾರದ ಹೆಜ್ಜೆ ಗುರುತು, ಇದಕ್ಕೆ ಸಂಬಂಧಿಸಿ ನಮ್ಮ ಕಮ್ಯುನಿಟಿ, ನಮ್ಮ ಪಾಲುದಾರರು ಮತ್ತು ನಮ್ಮ ಹೂಡಿಕೆದಾರರಿಗೆ ತಲುಪಿಸಲು ನಮ್ಮನ್ನು ಉತ್ತಮ ಸ್ಥಿತಿಯಲ್ಲಿ ಇರಿಸುತ್ತದೆ ಎಂದು ನಾವು ನಂಬಿದ್ದೇವೆ."
___
ಈ ಸಾರಾಂಶವು ಮುನ್ನೋಟದ ಹೇಳಿಕೆಗಳನ್ನು ಒಳಗೊಂಡಿದೆ. ಭವಿಷ್ಯದ ಈವೆಂಟ್‌ಗಳ ನಿರೀಕ್ಷೆಗಳು, ಪ್ರಸ್ತಾವನೆಗಳು, ಮಾರ್ಗದರ್ಶನಗಳು ಅಥವಾ ಇತರ ಗುಣಲಕ್ಷಣಗೊಳಿಸುವಿಕೆಗಳನ್ನು ಉಲ್ಲೇಖಿಸುವ ಯಾವುದೇ ಹೇಳಿಕೆಯು ಇಂದಿನ ನಮ್ಮ ಊಹೆಗಳನ್ನು ಆಧರಿಸಿದ ಮುನ್ನೋಟದ ಹೇಳಿಕೆಯಾಗಿದೆ. ನೈಜ ಫಲಿತಾಂಶಗಳು ಈ ಮುನ್ನೋಟದ ಹೇಳಿಕೆಗಳಲ್ಲಿ ವ್ಯಕ್ತಪಡಿಸಿರುವವುಗಳಿಗಿಂತ ವಾಸ್ತವಿಕವಾಗಿ ಭಿನ್ನವಾಗಿರಬಹುದು ಮತ್ತು ನಮ್ಮ ಬಹಿರಂಗಪಡಿಸುವಿಕೆಗಳನ್ನು ಅಪ್‌ಡೇಟ್ ಮಾಡುವ ಯಾವುದೇ ಬಾಧ್ಯತೆಗಳನ್ನು ನಾವು ಹೊಂದಿಲ್ಲ. ಈ ಮುನ್ನೋಟದ ಹೇಳಿಕೆಗಳಿಂದ ವಾಸ್ತವಿಕವಾಗಿ ನೈಜ ಫಲಿತಾಂಶಗಳು ವ್ಯತ್ಯಾಸವಾಗಲು ಕಾರಣವಾಗಬಹುದಾದ ಅಂಶಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು SEC ನೊಂದಿಗಿನ ನಮ್ಮ ಫೈಲಿಂಗ್ ಪರಿಶೀಲಿಸಿ. 
ಈ ಸಾರಾಂಶವು GAAP ಮತ್ತು GAAP-ಅಲ್ಲದ ಮಾಪನ ಎರಡನ್ನೂ ಒಳಗೊಂಡಿದೆ. ಎರಡರ ನಡುವಿನ ಸಮನ್ವಯವನ್ನು ನಮ್ಮ ಹೂಡಿಕೆದಾರರ ಸಂಬಂಧಗಳ ವೆಬ್‌ಸೈಟ್‌ನಲ್ಲಿರುವ ವಿಷಯವಸ್ತುಗಳಲ್ಲಿ ಕಾಣಬಹುದು. ನಮ್ಮ ಮಾಪನಗಳನ್ನು ನಾವು ಹೇಗೆ ಲೆಕ್ಕಾಚಾರ ಮಾಡುತ್ತೇವೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ದಯವಿಟ್ಟು SEC ನೊಂದಿಗಿನ ನಮ್ಮ ಫೈಲಿಂಗ್‌ಗಳನ್ನೂ ಪರಿಶೀಲಿಸಿ.
ಮರಳಿ ಸುದ್ಧಿಗೆ